

ನವದೆಹಲಿ: 17ನೇ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಬೆನ್ನಲ್ಲೇ ಗೌತಮ್ ಗಂಭೀರ್ (Gautam Gambhir) ಭಾರಿ ಹೈಪ್‌ನೊಂದಿಗೆ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಭಾರತ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಬಿಸಿಸಿಐ ಅವರು ಕೇಳಿದ ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೇ ನೀಡಿ ಪೂರ್ಣಬೆಂಬಲ ಒದಗಿಸಿತ್ತು. ಇದರಿಂದ ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟಿದ್ದರು. ಆದರೆ, ನಿರೀಕ್ಷೆಗಳೆಲ್ಲವೂ ಹುಸಿಯಾಗಿದ್ದು, ಗೌತಮ್ ಗಂಭೀರ್ ಕೋಚಿಂಗ್ ಅವಧಿಯಲ್ಲೇ ಕಳಪೆ ಪ್ರದರ್ಶನ ನೀಡುತ್ತಿದೆ.
ಗಂಭೀರ್ (Gautam Gambhir) ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ತಂಡವು ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿ ವೈಟ್ವಾಶ್ ಆಗುವ ಮೂಲಕ ಹೀನಾಯ ಮುಖಭಂಗವನ್ನು ಅನುಭವಿಸಿ ಬೇಡದ ದಾಖಲೆಗಳಿಗೆ ಕೊರಳೊಡ್ಡಿತ್ತು. ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲೂ ಕೂಡ ಭಾರತ ತಂಡ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದು, ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗಂಭೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೇ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಬಗ್ಗೆ ನಿರೀಕ್ಷೆಗಳು ಹೆಚ್ಚಿದ್ದು, ಮುಂದಿನ ಕೆಲ ದಿನಗಳ ಕಾಲ ಗೌತಮ್ ಗಂಭೀರ್ ಪಾಲಿಗೆ ನಿರ್ಣಾಯಕ ಎಂದು ಹೇಳಲಾಗಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರಿ ವಹಿಸಿಕೊಂಡ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಉತ್ತಮ ವಾತಾವರಣವಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ದ್ರಾವಿಡ್ ಹಾಗೂ ರವಿಶಾಸ್ತ್ರಿ ಇದ್ದ ಸಮಯಕ್ಕಿಂತಲೂ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಯಕ ರೋಹಿತ್ ಶರ್ಮ ಆಟಗಾರರ ಆಯ್ಕೆ ಸಂಬಂಧ ಮುಂವೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಗಂಭೀರ್ ಕೋಚ್ ಆದ ಬಳಿಕ ರೋಹಿತ್ ಶರ್ಮ ಅನೇಕ ಬಾರಿ ಆಟಗಾರರೊಂದಿಗೆ ಸಂವಹಿಸಿಲ್ಲ ಎಂದು ತಿಳಿದು ಬಂದಿದ್ದು, ಈ ಬೆಳವಣಿಗೆ ತಂಡದ ಪಾಲಿಗೆ ಸಾಕಷ್ಟು ಅಪಾಯಕಾರಿಯಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಒಂದು ವೇಳೆ ಭಾರತ ತಂಡ ಸೋತರೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಗಂಭೀರ್ ಪಾಲಿಗೆ ಕೊನೆಯಾಗಲಿದೆ. ಸಿಡ್ನಿ ಟೆಸ್ಟ್ ಬಳಿಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಬೇಕಾಗಿದ್ದು, ಒಂದು ವೇಳೆ ತಂಡದ ಪ್ರದರ್ಶನ ಸುಧಾರಿಸದಿದ್ದಲ್ಲಿ ಗಂಭೀರ್ ಅವರ ಸ್ಥಾನಕ್ಕೆ ಕುತ್ತು ಬರುವುದು ನಿಶ್ಚಿತ ಎಂದು ಹೇಳಲಾಗಿದೆ. ಅಂದರೆ ಮುಂದಿನ 68 ದಿನಗಳ ಕಾಲ ಗಂಭೀರ್ (Gautam Gambhir) ಪಾಲಿಗೆ ಮಹತ್ವದಾಗಿದ್ದು, ಏನಾಗಲಿದೆ ಎಂದು ಕಾದು ನೋಡಬೇಕಿದೆ.