Gautam Gambhir ನಮ್ಮ ಮೊದಲ ಆಯ್ಕೆಯಾಗಿರಲಿಲ್ಲ, ಆತನ ವಿಚಾರದಲ್ಲಿ ರಾಜಿಯಾಗಿದೆ; ಶಾಕಿಂಗ್​ ಹೇಳಿಕೆ ನೀಡಿದ ಬಿಸಿಸಿಐನ ಹಿರಿಯ ಅಧಿಕಾರಿ

Gautam Gambhir
Published on

ಮುಂಬೈ: ಹಾಲಿ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಭಾರತ ತಂಡದ ಪ್ರದರ್ಶನಕ್ಕೆ ಫ್ಯಾನ್ಸ್​ ಕಿಡಿಕಾರುತ್ತಿದ್ದು, ಮಾಜಿ ಕ್ರಿಕೆಟಿಗರು ಟೀಕಿಸಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಟಿ20 ವಿಶ್ವಕಪ್​ ಬಳಿಕ ಭಾರತ ತಂಡ ಏಕದಿನ ಹಾಗೂ ಟೆಸ್ಟ್​ ಮಾದರಿಯಲ್ಲಿ ಕಳಪೆ ನಿರ್ವಹಣೆ ತೋರಿದ್ದು, ಮುಖ್ಯವಾಗಿ ಗೌತಮ್​ ಗಂಭೀರ್ (Gautam Gambhir)​ ವಿರುದ್ಧ ಫ್ಯಾನ್ಸ್​ ಹಾಗೂ ಮಾಜಿ ಕ್ರಿಕೆಟಿಗರು ಕಿಡಿಕಾರುತ್ತಿದ್ದಾರೆ.

17ನೇ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಬೆನ್ನಲ್ಲೇ ಗೌತಮ್ ಗಂಭೀರ್ (Gautam Gambhir) ಭಾರಿ ಹೈಪ್‌ನೊಂದಿಗೆ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಭಾರತ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಬಿಸಿಸಿಐ ಅವರು ಕೇಳಿದ ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೇ ನೀಡಿ ಪೂರ್ಣಬೆಂಬಲ ಒದಗಿಸಿತ್ತು. ಇದರಿಂದ ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟಿದ್ದರು.

ಗಂಭೀರ್ (Gautam Gambhir) ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ತಂಡವು ಶ್ರೀಲಂಕಾ ಹಾಗೂ ನ್ಯೂಜಿಲೆಂಡ್​ ವಿರುದ್ಧ ಸರಣಿ ವೈಟ್​ವಾಶ್​ ಆಗುವ ಮೂಲಕ ಹೀನಾಯ ಮುಖಭಂಗವನ್ನು ಅನುಭವಿಸಿ ಬೇಡದ ದಾಖಲೆಗಳಿಗೆ ಕೊರಳೊಡ್ಡಿತ್ತು. ಇದೀಗ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲೂ ಕೂಡ ಭಾರತ ತಂಡ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದು, ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗಂಭೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಗಂಭೀರ್​ರನ್ನು ಕೋಚ್​ ಆಗಿ ನೇಮಿಸಿದ ಕುರಿತು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.

Gautam Gambhir

ಈ ಕುರಿತು ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಟೀಮ್​ ಇಂಡಿಯಾ ಕೋಚ್​ ಆಗಿ ಗೌತಮ್​ ಗಂಭೀರ್​ (Gautam Gambhir) ನಮ್ಮ ಮೊದಲ ಆಯ್ಕೆಯಾಗಿರಲಿಲ್ಲ. ಭಾರತೀಯರು ಸೇರಿದಂತೆ ವಿದೇಶಿಗರು ಕೂಡ ಕೋಚ್​ ಹುದ್ದೆಗೆ ಅರ್ಜಿ ಹಾಕಿದ್ದರು. ಆದರೆ, ಮೂರು ಮಾದರಿಗಳಲ್ಲಿ ತಂಡವನ್ನು ಮುನ್ನಡೆಸಲು ಯಾರು ಮುಂದೆ ಬರಲಿಲ್ಲ. ಹೀಗಾಗಿ ಗೌತಮ್​ ಗಂಭೀರ್​ರನ್ನು ಕೋಚ್​ ಆಗಿ ಆಯ್ಕೆ ಮಾಡಬೇಕಾಯಿತು. ಇದಲ್ಲದೆ ಆತನೊಂದಿಗೆ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಯಿತು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ ವಿಚಾರಕ್ಕೆ ಬರುವುದಾದರೆ ಗೌತಮ್​ (Gautam Gambhir) ಮೇಲೆ ಕ್ರೀಡಾಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದ್ದು, ಒಂದು ವೇಳೆ ತಂಡದ ಏನಾದರೂ ಎಡವಿದ್ದಲ್ಲಿ ಗಂಭೀರ್​ ಅವರನ್ನು ಕೋಚ್​ ಹುದ್ದೆಯಿಂದ ತೆಗೆದುಹಾಕಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. 2027ರ ಏಕದಿನ ವಿಶ್ವಕಪ್‌ವರೆಗೂ ಅವಧಿ ಹೊಂದಿರುವ 43 ವರ್ಷದ ಗಂಭೀರ್‌ಗೆ ಮುಂಬರುವ ಸರಣಿಗಳು ಇನ್ನಷ್ಟು ಕಠಿಣ ಸವಾಲಾಗಿ ಮಾರ್ಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net