

ಶಿವ ನಿರ್ವಾಣ ನಿರ್ದೇಶನದ ಪ್ಯಾನ್ ಇಂಡಿಯಾ ರೊಮ್ಯಾಂಟಿಕ್ ಡ್ರಾಮಾ 'ಖುಷಿ' ಇದೇ ಸೆ.1ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ವಿಜಯ್ ದೇವರಕೊಂಡ, ಸಮಂತಾ ರುತ್ ಪ್ರಭು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ದೊಡ್ಡ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ. ಇದೀಗ ಚಿತ್ರಕ್ಕಾಗಿ ನಾಯಕ, ನಾಯಕಿ, ನಿರ್ದೇಶಕ ಮತ್ತು ಉಳಿದ ತಾರಾಗಣ ಪಡೆದಿದೆ ಎನ್ನಲಾದ ಸಂಭಾವನೆ ಟಾಲಿವುಡ್ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹೌದು, "ಲೈಗರ್' ಸಿನಿಮಾ ಸೋತರೂ ವಿಜಯ್ ದೇವರಕೊಂಡಗೆ ಬೇಡಿಕೆ ಏನೂ ಕಡಿಮೆಯಾಗಿಲ್ಲ. ಅದಕ್ಕೆ ಉದಾಹರಣೆ ಈ ಖುಷಿ ಸಿನಿಮಾ. ಈ ಚಿತ್ರಕ್ಕಾಗಿ ಅವರು ಬರೋಬ್ಬರಿ 23 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಹಾಗೇ ಸಮಂತಾ ರುತ್ ಪ್ರಭು ಸಹ ಸಂಭಾವನೆ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಈ ಹಿಂದಿನ ಸಿನಿಮಾಗಳಾದ 'ಯಶೋಧಾ', 'ಶಾಕುಂತಲ' ಚಿತ್ರಗಳಿಗೆ ನಿರೀಕ್ಷಿಸಿದಷ್ಟು ಯಶಸ್ಸು ಸಿಕ್ಕಿಲ್ಲವಾದರೂ, 'ಖುಷಿ' ಚಿತ್ರಕ್ಕೆ ಅವರು 4.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಆದರೆ, ನಾಯಕ ಅಥವಾ ನಾಯಕಿ ಸಂಭಾವನೆಗಿಂತ ಹೆಚ್ಚು ಕುತೂಹಲ ಮೂಡಿಸಿರುವುದು ನಿರ್ದೇಶಕ ಶಿವ ನಿರ್ವಾಣ ಪಡೆದಿರುವ ಸಂಭಾವನೆ. ಏಕೆಂದರೆ ಅವರು ಈ ಚಿತ್ರಕ್ಕಾಗಿ ಸರಿಸುಮಾರಿ 12 ಕೋಟಿ ರೂ. ಹಣ ಜೇಬಿಗಿಳಿಸಿಕೊಂಡಿದ್ದಾರಂತೆ.
ಉಳಿದಂತೆ ಚಿತ್ರದಲ್ಲಿ ಜಯಂ ರವಿ, ವೆನ್ನೆಲಾ ಕಿಶೋರ್ ಮತ್ತು ಮುರಳಿ ಶರ್ಮಾ ಪ್ರಮುಖ ತಾರಾಗಣದಲ್ಲಿದ್ದು, ಅವರು 20 ಲಕ್ಷ ರೂ.ನಿಂದ 80 ಲಕ್ಷ ರೂ.ವರೆಗೆ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
-ಏಜೆನ್ಸೀಸ್