

ಗ್ರಾಮ ಆಡಳಿತಾಧಿಕಾರಿಗಳ(VAO) ನೇಮಕಾತಿಯನ್ನು ಒಂದು ರೂಪಾಯಿ ಲಂಚವಿಲ್ಲದೇ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಣೆ, ಅಭಿಶಿಕ್ಷಣ ತರಬೇತಿ ಮತ್ತು 4000 ಕ್ರೋಮ್ ಬುಕ್ ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಹಿಂದೆ 94-95 ರಲ್ಲಿ ಗೋವಿಂದೇಗೌಡರು ಇದ್ದ ಸಂದರ್ಭದಲ್ಲಿ ಒಂದು ಲಕ್ಷ ಉಪಾಧ್ಯಾಯರನ್ನು ಲಂಚವಿಲ್ಲದೇ, ಮಧ್ಯವರ್ತಿಗಳಿಲ್ಲದೇ ನೇಮಕಾತಿ ಮಾಡಲಾಗಿತ್ತು. ಪ್ರಸ್ತುತ ಆರು ಲಕ್ಷ ಅರ್ಜಿಗಳಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಆಯ್ಕೆಯಾಗಿದ್ದು, ಆಯ್ಕೆಯಾಗಿರುವವರು ಪುಣ್ಯವಂತರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದೀರಿ. 9834 ಒಟ್ಟು ಗ್ರಾಮ ಆಡಳಿತಾಧಿಕಾಗಳಿದ್ದು, ಅದರಲ್ಲಿ 8003 ಜನ ಕಾರ್ಯನಿರ್ವಹಿಸುತ್ತಿದ್ದಾರೆ.ಈಗ 1000 ಜನ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಗ್ರಾಮ ಆಡಳಿತಾಧಿಕಾರಿಯ ಹುದ್ದೆ ಖಾಲಿ ಇಲ್ಲದಂತೆ ಭರ್ತಿ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಅಲ್ಲೇ ಇದ್ದು ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮಗಳಲ್ಲಿಯೇ ವಾಸ ಮಾಡುವುದು ಉತ್ತಮ ಎಂದರು.
ನಮ್ಮ ದೇಶ ಗ್ರಾಮಗಳ ದೇಶ. ಕೃಷಿ ಪ್ರಮುಖವಾದ ಉದ್ಯೋಗವಾಗಿದ್ದು, ಹೆಚ್ಚು ಶೇ 60 ಕ್ಕೂ ಹೆಚ್ಚು ಜನ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಜಮೀನುಗಳ ಲೆಕ್ಕ ಇಡುವುದು ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿ. ಹಳ್ಳಿಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಲು ದಾಖಲಾತಿಗಳು ಸರಿಯಾಗಿರಬೇಕು. ದಾಖಲೆಗಳನ್ನು ಬಹಳ ಕರಾರುವಾಕ್ಕಾಗಿ ಇಡುವುದು ಅವಶ್ಯಕ. ಆಧುನಿಕ ನಾಡಿನಲ್ಲಿ ತಂತ್ರಜ್ಞಾನ, ವಿಜ್ಞಾನ ಬೆಳೆದಿದೆ. ಈಗ ಪ್ರತಿಯೊಂದೂ ಡಿಜಿಟಲೀಕರಣವಾಗಿದೆ. ಆನ್ ಲೈನ್ ನಲ್ಲಿ ದಾಖಲಾತಿಗಳನ್ನು ಪಡೆಯುವ ವ್ಯವಸ್ಥೆ ಬಂದ ನಂತರ ನಾವು ಯಾವುದೇ ಕಾರಣಕ್ಕೂ ತಪ್ಪುಗಳಿಗೆ ಅವಕಾಶ ನೀಡಬಾರದು. ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿ ಬಹಳ ಮಹತ್ವದ್ದು. ರೈತರಿಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಹತ್ತಿರದ ಸಂಬಂಧವಿದ್ದು, ಪ್ರತಿಯೊಬ್ಬ ರೈತರ ಪರಿಚಯ ಅವರಿಗಿರುತ್ತದೆ. ಅವರ ಭೂಮಿಯ ಕುರಿತು ಮಾಹಿತಿ ಗೊತ್ತಿರುತ್ತದೆ. ಅವರ ಪರಿಚಯವಿಟ್ಟುಕೊಂಡು ಅಗತ್ಯ ದಾಖಲಾತಿಗಳನ್ನು ಒದಗಿಸುವುದು ನಿಮ್ಮ ಕೆಲಸ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.