

ಪ್ರಶಾಂತ ರಿಪ್ಪನ್ಪೇಟೆ, ಬೆಂಗಳೂರು : ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯ ಬಂತೆಂದರೆ ಮಹಿಳೆಯರಲ್ಲಿ ಎಲ್ಲಿಲ್ಲದ ಸಂಭ್ರಮ. ಅಂದು ಬಂಗಾರವನ್ನು ಖರೀದಿಸಲೇಬೇಕೆಂಬ ಭಾವನೆ ಹಲವರಲ್ಲಿದೆ. ಆದರೆ ಬಂಗಾರ ಖರೀದಿಯ ಹಿನ್ನೆಲೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಹಿಂದು ಶಾಸಗಳಲ್ಲಿ ಪ್ರತಿಯೊಂದು ಹಬ್ಬ-ವ್ರತಗಳಿಗೂ ವಿವರಗಳಿವೆ. ಆ ಪ್ರಕಾರ ಅಕ್ಷಯ ತೃತೀಯವನ್ನು ತದಿಗೆ ಗೌರಿ ವ್ರತ ಎಂದು ಕರೆಯಲಾಗುತ್ತದೆ. ವ್ರತರತ್ನಮಾಲ ಎಂಬ ಬೃಹತ್ ಗ್ರಂಥದಲ್ಲಿ ಸೂತ ಪುರಾಣಿಕರು ತದಿಗೆ ಗೌರಿವ್ರತವನ್ನು ಕುರಿತು ವಿವರಿಸಿದ್ದಾರೆ. ವ್ರತವನ್ನು ಮಾಡುವ ವಿಧಾನ, ಕ್ರಮ, ನಿಯಮ ಮತ್ತು ಲ ಎಲ್ಲವನ್ನು ವ್ರತಕತೆಯಲ್ಲಿ ತಿಳಿಸಿದ್ದಾರೆ. ಚಂದ್ರಪ್ರಭಾ ಎಂಬ ಮಹಾರಾಜನು ಬೇಟೆಗಾಗಿ ಕಾಡಿಗೆ ಹೋದಾಗ, ಅಪ್ಸರಕೊಳದ ಬಳಿ ದೇವಕನ್ಯೆಯರು ಸ್ವರ್ಣಗೌರಿ ವ್ರತವನ್ನು ಮಾಡುತ್ತಿದ್ದುದನ್ನು ನೋಡುತ್ತಾನೆ. ಅವರಿಂದ ವ್ರತ ನಿಯಮವನ್ನು ಕೇಳಿ ತಿಳಿದು ತಾನು ಪ್ರಜಾ ಕ್ಷೇಮಕ್ಕಾಗಿ ವ್ರತವನ್ನು ಮಾಡುತ್ತಾನೆ. ವ್ರತದ ಕಂಕಣ ದಾರಗಳನ್ನು ತನ್ನ ಇಬ್ಬರು ಪತ್ನಿಯರಿಗೆ ಕಟ್ಟಿದಾಗ ಹಿರಿಯ ಪತ್ನಿ ಅನುಮಾನದಿಂದ ಕಿತ್ತು ಎಸೆದು ಬಹಳ ಕಷ್ಟ ಅನುಭವಿಸುತ್ತಾಳೆ. ಕಿರಿಯ ಪತ್ನಿ ಭಕ್ತಿಯಿಂದ ಕಟ್ಟಿ ಸಕಲ ಸುಖವನ್ನು ಅನುಭವಿಸುತ್ತಾಳೆ. ನೂತನ ಸಂವತ್ಸರ ಆರಂಭವಾದ ಚೈತ್ರ ಮಾಸದಲ್ಲಿ ಹಲವು ಹಬ್ಬ, ಮಹಾತ್ಮರ ಜನ್ಮದಿನ, ವ್ರತಗಳು ನಡೆಯುತ್ತವೆ. ಅದೇ ರೀತಿ ವೈಶಾಖ ಮಾಸದ ತೃತೀಯ ತಿಥಿಯಂದು ತದಿಗೆ ಗೌರಿ ವ್ರತವನ್ನು ಹೇಳಿದ್ದಾರೆ. ಈ ದಿನವನ್ನು ಅಕ್ಷಯ ತೃತೀಯ ಅಥವಾ ಅಕ್ಷಯ ತದಿಗೆ ಎಂತಲೂ ಕರೆಯಲಾಗುತ್ತದೆ. ಕ್ಷಯ ಎಂದರೆ ಲೋಪ, ಕಡಿಮೆ, ನಾಶ ಎಂಬರ್ಥವಿದ್ದು, ಅಕ್ಷಯ ಎಂದರೆ ಎಂದಿಗೂ ಕಡಿಮೆಯಾಗಲಾರದ್ದು, ನಾಶವಾಗಲಾರದ್ದು, ವೃದ್ಧಿಸುವುದು ಎಂದರ್ಥ. ಈ ದಿನದಂದು ಮಹಾಗೌರಿಯನ್ನು ಪೂಜಿಸುವುದರಿಂದ ಕುಟುಂಬದ ಕಲ್ಯಾಣವಾಗಿ, ದೀರ್ಘ ಸೌಮಂಗಲ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ ಯಾವುದೇ ವ್ರತ, ಪೂಜೆಗಳನ್ನು ಮಾಡುವಾಗ ದೇವರನ್ನು ಸರ್ವಾಲಂಕಾರಗೊಳಿಸಿ ಪೂಜಿಸುವುದು ಪದ್ಧತಿ. ಅಂತೆಯೇ ಅಕ್ಷಯ ತೃತೀಯದಂದು ಮಾಡುವ ತದಿಗೆ ಗೌರಿವ್ರತದಲ್ಲಿ ದೇವಿಗೆ ಬಂಗಾರದ ಒಡವೆಯನ್ನು ತೊಡಿಸಿ ಪೂಜಿಸುವುದರಿಂದ ಮನೆಯಲ್ಲಿ ಬಂಗಾರ ವೃದ್ಧಿಸುತ್ತದೆ ಎಂಬ ಪ್ರತೀತಿ ಇದೆ. ಸಾಮಾನ್ಯ ಜನರು ವ್ರತ, ಪೂಜೆ, ನಿಯಮಗಳನ್ನೆಲ್ಲ ಗೌಣಗೊಳಿಸಿ ಕೇವಲ ಅಕ್ಷಯ ತದಿಗೆಯಂದು ಖರೀದಿಸುವ ಬಂಗಾರ ವೃದ್ಧಿಯಾಗುತ್ತದೆ ಎಂಬ ಅಂಶವನ್ನಷ್ಟೇ ಪ್ರಧಾನವಾಗಿ ಅನುಸರಿಸುತ್ತಿದ್ದಾರೆ. ಅಕ್ಷಯ ತೃತೀಯದಂದು ಜಗದ್ಗುರು ಏಕೋರಾಮಾರಾಧ್ಯರು, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ ಹಾಗೂ ಮಹಾವಿಷ್ಣುವಿನ ಪರುಶುರಾಮ, ವರಾಹಾವತಾರ ಕೂಡಾ ಇದೇ ದಿನ ನಡೆದ ಉಲ್ಲೇಖವಿದೆ. ತ್ರೇತಾಯುಗದ ಆರಂಭ, ಮಹಾಭಾರತದ ರಚನೆ, ತುಳಸಿ ರಾಮಾಯಣ ರಚನೆ, ಗಂಗೆ ಶಿವನ ಜಟೆಯಿಂದ ಭುವಿಗಿಳಿದಿದ್ದು, ಪಾಂಡವರಿಗೆ ಅಕ್ಷಯಪಾತ್ರೆ ದೊರೆಕಿದ್ದು, ಕುಬೇರ ಧನಸಂಪತ್ತಿನ ಅಧಿಪತಿಯಾಗಿದ್ದು ಹೀಗೆ ಹಲವು ಮಹತ್ವದ ಸಂದರ್ಭ ಘಟಿಸಿದ್ದು ಅಕ್ಷಯ ತೃತೀಯಾದಂದು. ವರ್ಷದಲ್ಲಿ ಎರಡು ಮಹಾ ಮುಹೂರ್ತಗಳಿದ್ದು, ಒಂದು ವಿಜಯ ದಶಮಿ ಇನ್ನೊಂದು ಅಕ್ಷಯ ತದಿಗೆ. ಶುಭಕಾರ್ಯ ಮಾಡುವುದಕ್ಕೆ ಇವು ಶ್ರೇಷ್ಠ ದಿನಗಳು.
ಬಾದ್ರಪದ ಮಾಸದ ತದಿಗೆಯಂದು ಮಾಡುವ ಸ್ವರ್ಣಗೌರಿ ವ್ರತದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಗೌರಿ-ಗಣೇಶ ಹಬ್ಬದ ಹೆಸರಿನಲ್ಲಿ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ವೈಶಾಖ ಮಾಸದ ತದಿಗೆಯಂದು ಮಾಡುವ ಗೌರಿವ್ರತದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಹಿಂದು ಪಂಚಾಂಗದ ಪ್ರಕಾರ ಪ್ರತಿ ಹಬ್ಬ, ವ್ರತಗಳು ನಿರ್ಣಯವಾಗುವುದು ಮಾಸಗಳಲ್ಲಿ ಬರುವ ತಿಥಿಯನ್ನು ಅವಲಂಬಿಸಿ. ಆ ಪ್ರಕಾರ ವೈಶಾಖ ಮಾಸದಿಂದ ಬಾದ್ರಪದ ಮಾಸದ ತದಿಗೆಗೆ 5 ತಿಂಗಳುಗಳಿದ್ದು, ಅಕ್ಷಯ ತದಿಗೆಯಂದು ಮಾಡುವ ಗೌರಿವ್ರತ ಬಾದ್ರಪದ ತದಿಗೆಯಂದು ಮಾಡುವ ಗೌರಿವ್ರತದ ಪೂರ್ವಭಾವಿ ಪೂಜೆ ಎನ್ನಲಾಗುತ್ತದೆ. ವೈಶಾಖ ಮಾಸದಿಂದ ಆರಂಭಿಸಿ 5 ತಿಂಗಳ ವರೆಗೆ ಪ್ರತಿ ತಿಂಗಳ ತದಿಗೆಯಂದು ಗೌರಿಯನ್ನು ಪೂಜಿಸಿ ಅಂತಿಮವಾಗಿ ಬಾದ್ರಪದ ಮಾಸದ ತದಿಗೆಯಂದು ಅದ್ಧೂರಿಯಾಗಿ ಸ್ವರ್ಣಗೌರಿಯನ್ನು ಪೂಜಿಸುವ ಪದ್ಧತಿ ಕೆಲವು ಮನೆಗಳಲ್ಲಿದೆ. ಬಂಗಾರ, ಬೆಳ್ಳಿ, ಇನ್ನಿತರೆ ಲೋಹ ಅಥವಾ ಮಣ್ಣಿನ ಗೌರಿಯನ್ನು ಪ್ರತಿಷ್ಠಾಪಿಸಿ ಪಂಚಾಮೃತ ಅಭಿಷೇಕ ಮಾಡಿ, 21 ದಳದ ಪತ್ರೆಯನ್ನು ಸಮರ್ಪಿಸಿ ಗೌರಿ ಅಷ್ಟೋತ್ತರ ಅಥವಾ ಲಲಿತಾ ಸಹಸ್ರನಾಮವನ್ನು ಪಠಿಸಿ ಪೂಜೆಯನ್ನು ಮಾಡಬೇಕು. ಮಹಾಗೌರಿಗೆ ಮಲ್ಲಿಗೆ ಹೂವಿನ ಅರ್ಪಣೆ ಹಾಗೂ ಹೂರಣದ ಒಬ್ಬಟ್ಟು ನೈವೇದ್ಯ ಕಡ್ಡಾಯ. ಈ ಕ್ರಮದಲ್ಲಿ ತದಿಗೆ ಗೌರಿವ್ರತವನ್ನು ಮಾಡಿದ್ದಾದಲ್ಲಿ ಅಖಂಡ ಸೌಭಾಗ್ಯ, ವಂಶಾಭಿವೃದ್ಧಿ ಹಾಗೂ ಸರ್ವ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಹಿರಿಯರ ನಂಬಿಕೆ.