

ಸ್ಯಾನ್ಫ್ರಾನ್ಸಿಸ್ಕೋ: ಮೆಟಾ ಕಂಪನಿ ಒಡೆತನದ ಥ್ರೆಡ್ಸ್ ಆ್ಯಪ್ ನಿನ್ನೆಯಷ್ಟೇ ಬಿಡುಗಡೆಯಾಗಿ, ಮೊದಲ ದಿನವೇ ಭಾರೀ ಜನಮನ್ನಣೆ ಗಳಿಸಿದೆ. ಇದರ ಬೆನ್ನಲ್ಲೇ ಮೆಟಾ ವಿರುದ್ಧ ಟ್ವಿಟರ್ ಕಂಪನಿ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ ಎಂದು ನ್ಯೂಯಾರ್ಕ್ ಮೂಲಕ ಸೆಮಾಫಾರ್ ಗುರುವಾರ ವರದಿ ಮಾಡಿದೆ.
ಟ್ವಿಟರ್ ಕಂಪನಿ ಪರ ವಕೀಲ ಅಲೆಕ್ಸ್ ಸ್ಪೈರೋ, ಮೆಟಾ ಕಂಪನಿಯ ಸಿಇಒ ಮಾರ್ಕ್ ಜೂಕರ್ಬರ್ಗ್ ಅವರಿಗೆ ಪತ್ರವನ್ನು ಕಳಿಸಿದ್ದಾರೆ. ಒಂದೇ ದಿನದಲ್ಲಿ ಥ್ರೆಡ್ಸ್ ಆ್ಯಪ್ ಗಳಿಸಿದ ಜನಪ್ರಿಯತೆ ಕಂಡು ಟ್ವಿಟರ್ ಮಾಲೀಕ ಎಲನ್ ಮಸ್ಕ್ ವಿಚಲಿತಗೊಂಡಿರುವಂತೆ ಕಾಣುತ್ತದೆ.
ಟ್ವಿಟರ್ ತನ್ನ ಬೌದ್ಧಿಕ ಆಸ್ತಿಯ ಹಕ್ಕನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಉದ್ದೇಶಿಸಿದೆ ಮತ್ತು ಟ್ವಿಟರ್ನ ಯಾವುದೇ ವ್ಯಾಪಾರ ರಹಸ್ಯ ಅಥವಾ ಇತರ ಅತ್ಯಂತ ಗೌಪ್ಯ ಮಾಹಿತಿ ಬಳಸುವುದನ್ನು ನಿಲ್ಲಿಸಲು ಮೆಟಾ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಸ್ಪೈರೋ ಬರೆದಿದ್ದಾರೆ ಎಂದು ವರದಿಯಾಗಿದೆ.
ಬಿಡುಗಡೆಯಾದ ಒಂದೇ ತಾಸಿನಲ್ಲಿ 1 ಕೋಟಿ ಜನರು ಲಾಗಿನ್
ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರ ಹೊಸ ಸಾಮಾಜಿಕ ಜಾಲತಾಣ ‘ಥ್ರೆಡ್ಸ್’ ಗುರುವಾರ ಚಾಲನೆಗೊಂಡಿದೆ. ಆರಂಭವಾದ ಏಳು ತಾಸಿನಲ್ಲೇ ಒಂದು ಕೋಟಿ ಜನರು ಲಾಗ್ಇನ್ ಆಗಿದ್ದಾರೆ. ಈ ಮೂಲಕ ಟೆಸ್ಲಾ ಸಿಇಒ ಎಲನ್ ಮಸ್ಕ್ ಅವರ ಟ್ವಿಟರ್ಗೆ ಸವಾಲು ಹಾಕಿದೆ. ಚಾಲನೆಯಾದ ಮೊದಲೆರಡು ತಾಸಿನಲ್ಲೇ 20 ಲಕ್ಷ ಜನರು ಥ್ರೆಡ್ಸ್ಗೆ ಸೈನ್ ಇನ್ ಆದರು. ನಾಲ್ಕು ತಾಸಿನಲ್ಲಿ ಈ ಸಂಖ್ಯೆ 50 ಲಕ್ಷಕ್ಕೆ ಏರಿತು. ಮತ್ತೆ ಮೂರು ತಾಸು ಕಳೆಯುವಷ್ಟರಲ್ಲಿ ಒಂದು ಕೋಟಿಗೆ ತಲುಪಿತು ಎಂದು ಜೂಕರ್ಬರ್ಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಥ್ರೆಡ್ಸ್ ಬಳಕೆದಾರ ಸಂಖ್ಯೆ ಏರುತ್ತಿರುವುದರಿಂದ ಇದು ಟ್ವಿಟರ್ ಅನ್ನು ಮೀರಿ ಬೆಳೆಯುವುದೇ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಥ್ರೆಡ್ಸ್ನಲ್ಲೇ ಇನ್ಸ್ಟಾಗ್ರಾಮ್ ಲಿಂಕ್ ಸಿಗುತ್ತಿರುವುದು ಅನುಕೂಲಕರವಾಗಿದೆ ಎಂದು ಹಲವರು ಹೇಳಿದ್ದರೆ, ಟ್ವಿಟರ್ ಸುದ್ದಿ ಅಥವಾ ಮಾಹಿತಿ ಆಧಾರಿತ ವೇದಿಕೆಯಾದರೆ, ಇನ್ಸ್ಟಾಗ್ರಾಂ ವಿಡಿಯೋಗೆ ಹೆಚ್ಚು ಒತ್ತು ನೀಡುವ ಜಾಲತಾಣವಾಗಿದೆ. ಹೀಗಾಗಿ ಇವೆರಡಕ್ಕೂ ಬದಲಿ ಆಗುವುದಕ್ಕೆ ಹೊಸ ವೇದಿಕೆಗೆ ಕಷ್ಟವಾಗಬಹುದು ಎಂದು ಮತ್ತೆ ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಾಲ್ಕನೇ ಒಂದು ಭಾಗದಷ್ಟು ಬಳಕೆದಾರರು ಥ್ರೆಡ್ಸ್ಗೆ ಬಂದರೂ ಸಾಕು ಅದು ಟ್ವಿಟರ್ಗೆ ಪ್ರತಿ ಸ್ಪರ್ಧಿ ಆಗುತ್ತದೆ ಎಂಬುದು ಮೆಟಾ ಅಭಿಪ್ರಾಯ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿನ ಉತ್ತಮಾಂಶಗಳನ್ನು ತೆಗೆದುಕೊಳ್ಳುವುದು ಮತ್ತು ಹೊಸ ಅನುಭವನ್ನು ಹಂಚಿಕೊಳ್ಳುವುದು, ಸ್ನೇಹಭಾವದ ಚರ್ಚೆ ನಡೆಯುವಂತೆ ಮಾಡುವುದು ಹೊಸ ಜಾಲತಾಣದ ಉದ್ದೇಶ ಎಂದು ತಿಳಿಸಿದೆ.
ಐಎಸ್ಒ ಬಳಕೆದಾರರಿಗೆ ಆಪ್ ಸ್ಟೋರ್ ಮತ್ತು ಆಂಡ್ರಾಯ್್ಡ ಬಳಕೆದಾರರಿಗೆ ಪ್ಲೇ ಸ್ಟೋರ್ನಲ್ಲಿ ಥ್ರೆಡ್ಸ್ ಆಪ್ ಲಭ್ಯವಿದೆ. ಡೌನ್ಲೋಡ್ ಮಾಡಿಕೊಂಡು ಬಳಸಬಹುದು. ಚಿತ್ರ, ವಿಡಿಯೋ,ಗ್ರಾಫಿಕ್ಸ್ಗಳನ್ನು ಸೇರಿ 500 ಪದಗಳವರೆಗೆ ಮತ್ತು ಐದು ನಿಮಿಷದ ವಿಡಿಯೋ ಸಂದೇಶ ಕಳುಹಿಸಬಹುದು. ಒಮ್ಮೆ ಇದರಲ್ಲಿ ಖಾತೆ ತೆರೆದರೆ ಅದನ್ನು ನಿಷ್ಕ್ರಿಯವಾಗಿ ಇಡಬಹುದೆ ಹೊರತು ಡಿಲೀಟ್ ಮಾಡಲು ಆಗುವುದಿಲ್ಲ.
ನೂರು ಕೋಟಿ ಜನರನ್ನು ಒಳಗೊಂಡ ಸಾರ್ವಜನಿಕ ಸಂಭಾಷಣೆಯ ಅಪ್ಲಿಕೇಷನ್ ಆಗಬೇಕು ಎಂಬುದು ನಮ್ಮ ಆಶಯ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಟ್ವಿಟರ್ಗೆ ಇದನ್ನು ಸಾಧಿಸುವ ಅವಕಾಶ ಇತ್ತು. ಆದರೆ, ಮಾಡಿಲ್ಲ. ನಾವು ಇದನ್ನು ಮಾಡುತ್ತೇವೆ ಎಂದು ಮೆಟಾ ಸಿಇಒ ಮಾರ್ಕ್ ಜೂಕರ್ಬರ್ಗ್ ಹೇಳಿದ್ದಾರೆ.
ಥ್ರೆಡ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಟ್ವಿಟರ್ ಮಾಲೀಕ ಎಲನ್ ಮಸ್ಕ್, ನಗುತ್ತಿರುವ ಇಮೋಜಿ ಹಾಕಿದ್ದಾರೆ ಮತ್ತು ಥ್ರೆಡ್ಸ್ ಅನ್ನು ಕಾಪಿ ಆಂಡ್ ಪೇಸ್ಟ್ ಬಳಸಿ ವಿನ್ಯಾಸ ಮಾಡಲಾಗಿದೆ ಎಂದು ಹಂಗಿಸಿದ್ದಾರೆ. ನೋವನ್ನು ನುಂಗಿಕೊಂಡು ಇನ್ಸ್ಟಾಗ್ರಾಮ್ ಹುಸಿ ಸಂತೋಷದಲ್ಲಿ ಪಾಲ್ಗೊಳ್ಳುವುದಕ್ಕಿಂತ ಟ್ವಿಟರ್ನಲ್ಲಿ ಅಪರಿಚಿತರಿಂದ ಆಕ್ರಮಣಕೊಳಗಾದರೂ ಅದು ಅತ್ಯಂತ ಯೋಗ್ಯವಾಗುತ್ತದೆ ಎಂದು ಟಿಪ್ಪಣಿಯನ್ನು ಮಸ್ಕ್ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)