ಹಿರಿಯ ನಟಿ ಲೀಲಾವತಿ ವಿಧಿವಶ: ಗಣ್ಯರಿಂದ ನುಡಿ ನಮನ

ವಿಜಯವಾಣಿ (20)
Published on

ಬೆಂಗಳೂರು: ಸ್ಯಾಂಡಲ್​ವುಡ್​​ನ ಹಿರಿಯ ನಟಿ, ಬಹುಭಾಷಾ ತಾರೆ ಲೀಲಾವತಿ (85) ಶುಕ್ರವಾರ ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿದರು. ಪುತ್ರ ವಿನೋದ್​ ರಾಜ್, ಕುಟುಂಬದವರು ಹಾಗೂ ಅಗಾಧ ಸಂಖ್ಯೆಯ ಅಭಿಮಾನಿಗಳನ್ನು ಇಂದು ಅಗಲಿದ್ದಾರೆ. ಲೀಲಮ್ಮನನ್ನು ಕಳೆದುಕೊಂಡ ದುಃಖದಲ್ಲಿರುವ ಚಿತ್ರರಂಗ ಸೇರಿದಂತೆ ಅನೇಕ ಗಣ್ಯರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗಿರುವ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡಿದ್ದು, ಅವರೊಂದಿಗಿನ ಒಡನಾಟದ ಬಗ್ಗೆ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಉಮಾಶ್ರೀ, ಕುಮಾರ್​ ಗೋವಿಂದ್, ಶಿವರಾಜ್​ಕುಮಾರ್​, ಶ್ರುತಿ, ವಾಟಾಳ್​ ನಾಗರಾಜ್, ಮಾಳವಿಕಾ ಅವಿನಾಶ್, ಸುಧಾರಾಣಿ, ಉಪೇಂದ್ರ, ಅಭಿನಯ, ಸಾಧು ಕೋಕಿಲ, ತಾರಾ, ಯಡಿಯೂರಪ್ಪ ಮುಂತಾದವರು ಲೀಲಾವತಿಯವರ ಅಂತಿಮ ದರ್ಶನ ಪಡೆದು, ಮಾತನಾಡಿದರು.

ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, "ಈಗಾಗಲೇ ಲೀಲಾವತಿ ಅವರ ನಿಧನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದೇನೆ. ಕಳೆದ ವಾರವಷ್ಟೇ ಫಾರ್ಮ್ ಹೌಸ್​ನಲ್ಲಿ ಅವರನ್ನು ಭೇಟಿಯಾಗಿದ್ದೆ, ವಿನೋದ್​ಗೆ ಏನಾದರೂ ಸಹಾಯ ಬೇಕಾ ಅಂತ ಕೇಳಿದ್ದೆ, ಅವರು ಏನು ಕೇಳಿಲ್ಲ.

ಲೀಲಾವತಿಯವರಿಗೆ ಸರ್ಕಾರದ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲು ಸೂಚಿಸಿದ್ದೇನೆ" ಎಂದರು.

"ಲೀಲಾವತಿಯವರು ರಂಗಭೂಮಿಯಿಂದ ಬಂದವರು. ಎಲ್ಲಾ ಭಾಷೆಯಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಪಾತ್ರಕ್ಕೂ ಜೀವ ತುಂಬಿ ಅಭಿನಯ ಮಾಡ್ತಾರೆ. ನಮ್ಮ ಕಾಲದಲ್ಲಿ ರಾಜ್​ಕುಮಾರ್ ಹಾಗೂ ಲೀಲಾವತಿ ಅವರದು ಬಹಳಷ್ಟು ಜನಪ್ರಿಯ ಜೋಡಿಯಾಗಿತ್ತು. 'ಕುಲವದು', 'ಗೆಜ್ಜೆಪೂಜೆ' ಅನೇಕ ಚಿತ್ರಗಳನ್ನು ನೋಡಿದ್ದೇನೆ. ಬಹಳಷ್ಟು ಮನೋಜ್ಞವಾಗಿ ಅಭಿನಯ ಮಾಡುವಂತ ಕಲೆ ಅಳವಡಿಸಿಕೊಂಡಿದ್ದರು. ಅವರು ಪರಿಪೂರ್ಣ ಕಲಾವಿದೆ" ಎಂದರು.

ಲೀಲಾವತಿ ಅವರನ್ನು ನೆನೆದ ವಾಟಾಳ್​ ನಾಗರಾಜ್​, "ನಾನು ನನ್ನ ತಾಯಿಯ ಹೆಸರಿನಲ್ಲಿ ದೇಗುಲ ಕಟ್ಟಿಸಿದ್ದೇನೆ. ಸತ್ಯವಂತ ಪ್ರಾಮಾಣಿಕ ವ್ಯಕ್ತಿಗಳು ಲೀಲಾವತಿ ಮತ್ತು ವಿನೋದ್. ಅವರ ಅಗಲಿಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಸಿನಿಮಾ ಮಾಡೋದೇ ಆದ್ರೆ, ವಿನೋದ್ ರಾಜ್ ಮತ್ತು ಲೀಲಾವತಿಯ ಅಮ್ಮ ಮಗನ ಬಾಂಧವ್ಯದ ಬಗ್ಗೆ ಚಲನಚಿತ್ರ ಮಾಡಲಿ" ಎಂದು ಚಲನಚಿತ್ರ ಮಂಡಳಿಗೆ ನಾಗರಾಜ್​ ಮನವಿ ಸಲ್ಲಿಸಿದರು.

"ಪರಿಸರವನ್ನು ಪ್ರೀತಿಸಿದಂತಹ ಜೀವ ಕಳೆದುಕೊಂಡಿರೋದು ತುಂಬಲಾರದ ನಷ್ಟ. ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅವರು ದೊಡ್ಡ ಮಟ್ಟದ ಗರಿಮೆ ತಂದು ಕೊಟ್ಟಿದ್ದಾರೆ" ಎಂದು ಸಾಧು ಕೋಕಿಲ ಹೇಳಿದರು. ಇನ್ನು ಲೀಲಮ್ಮನಿಗೆ ನಮನ ಸಲ್ಲಿಸಿದ ನಟಿ ಶೃತಿ, "ವಿನೋದ್ ಹೇಗೆ ಇರ್ತಾರೆ ಅನ್ನೋದು ನನಗೆ ತಿಳಿಯುತ್ತಿಲ್ಲ. ಈ ರೀತಿಯ ಆದರ್ಶ ಮಹಿಳೆ ಮತ್ತು ಕನ್ನಡತಿ ಮತ್ತೊಮ್ಮೆ ಕರುನಾಡಲ್ಲಿ ಹುಟ್ಟಿ ಬರಬೇಕು" ಎಂದು ಭಾವುಕರಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net