BBKS10: ಸಂಗೀತಾ-ಪ್ರತಾಪ್​ಗೆ ಚಿಕಿತ್ಸೆ! ಈ ವಾರ ಹೊರ ಹೋಗೋದ್ಯಾರು?

ವಿಜಯವಾಣಿ (18)
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ ಇದೀಗ 10ನೇ ವಾರದ ಕೊನೆಯಲ್ಲಿದ್ದು, ಇಡೀ ವಾರ ಮನೆಯ ಸದಸ್ಯರು ಆಡಿದ ಆಟದ ವೈಖರಿ ನೋಡಿ ವೀಕ್ಷಕರು ಆತಂಕ ವ್ಯಕ್ತಪಡಿಸಿದ್ದು. ತೀವ್ರ ಬೇಸರ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಬಿಗ್​ ಬಾಸ್​ ಕೊಟ್ಟ ರಾಕ್ಷಸರು ಮತ್ತು ಗಂಧರ್ವರ ಟಾಸ್ಕ್​! ರಕ್ಕಸರಾಗಿ ಒಂದು ತಂಡ ಆಡಿದರೆ, ಮತ್ತೊಂದು ತಂಡ ಗಂಧರ್ವರಾಗಿ ಅಖಾಡದಲ್ಲಿ ಬಿರುಸಿನ ಪೈಪೋಟಿ ನಡೆಸಿತು. ಸದ್ಯ ಈಗ ವಾರಾಂತ್ಯ ಎದುರಾಗಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ವೀಕ್ಷಕರ ಗೊಂದಲ ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗುಲಿದ್ಯಾ? ಎಂಬ ನಿರೀಕ್ಷೆ ಹೆಚ್ಚಿದೆ.

ಮೊದಲು ರಾಕ್ಷಸರಾಗಿ ಆಡಿದ ಸಂಗೀತಾ ತಂಡ ಎದುರಿನಲ್ಲಿದ್ದ ಗಂಧರ್ವರನ್ನು ಬೆಂಬಿಡದೆ ಶಿಕ್ಷಿಸಿದರು. ಇದಾದ ಬಳಿಕ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ರಕ್ಕಸರಾಗಿ ಆಟವಾಡುವ ಅವಕಾಶ ಪಡೆದ ವಿನಯ್​ ತಂಡ, ಗಂಧರ್ವರಾದ ತಂಡಕ್ಕೆ ಕಠಿಣ ಶಿಕ್ಷೆಗಳನ್ನು ಕೊಡುವ ಮೂಲಕ ಪ್ರತಿಕಾರ ತೀರಿಸಿಕೊಂಡರು. ಈ ವೇಳೆ ವಿಪರೀತಗೊಂಡ ಮಾತಿನ ಸಮರ, ತೀವ್ರ ವಾಗ್ವಾದಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಳ್ಳುವಂತೆ ಕೂಡ ಮಾಡಿತು.

ವಿನಯ್​ ಮತ್ತು ಕಾರ್ತಿಕ್ ನಡುವೆ ಕೆಟ್ಟ ಪದಗಳ ಬಳಕೆ ಹಾಗೂ ಚಪ್ಪಲಿ ಎಸೆತ ಕುರಿತು ನಡೆದ ಜಟಾಪಟಿ ತಾರಕಕ್ಕೇರಿದರೆ, ಅತ್ತ ನಮ್ರತಾ ಹಾಗೂ ಸಂಗೀತಾ ಮಧ್ಯೆ ಏಕವಚನ ದಾಳಿ ಕೂಡ ನಡೆಯಿತು. ಪ್ರತಿಕಾರಕ್ಕೆ ತಿರುಗಿದ ಈ ಟಾಸ್ಕ್​ನಲ್ಲಿ ಸೋಪಿನ ನೊರೆಭರಿತ ನೀರನ್ನು ಬಳಸಿ ಪ್ರತಾಪ್​ ಮತ್ತು ಸಂಗೀತಾಗೆ ಶಿಕ್ಷಿಸಿದ ರಾಕ್ಷಸರ ತಂಡ, ಜೋರು ಜೋರಾಗಿ ನೀರಿನಿಂದ ಇಬ್ಬರ ಮುಖಕ್ಕೆ ಅಪ್ಪಳಿಸಿದರು. ಇದರಿಂದ ತೊಂದರೆ ಅನುಭವಿಸಿದ ಸಂಗೀತಾ ತಕ್ಷಣವೇ ಕುಳಿತ ಜಾಗದಿಂದ ಹೊರಬಂದರು.

ಕಣ್ಣು ಬಿಡಲಾಗದೆ, ಉಸಿರಾಡಲಾಗದೆ ಪರದಾಡಿದ ಸಂಗೀತಾ, ಕಣ್ಣೀರಿಡುತ್ತ ಕನ್​ಫೆಷನ್​ ರೂಂಗೆ ತೆರಳಿ ಅಗತ್ಯ ಚಿಕಿತ್ಸೆ ಪಡೆಯಲು ಮುಂದಾದರು. ಇದೇ ಸಮಯಕ್ಕೆ ಪ್ರತಾಪ್ ಕೂಡ ಈ ಸಂಕಟದಿಂದ ಕೂಡಲೇ ಹೊರಬಂದಿದ್ದು, ಅಳುತ್ತ ಚಿಕಿತ್ಸೆಗಾಗಿ ಓಡಿದ್ದಾರೆ. ಸದ್ಯ ಮನೆಯೊಳಗೆ ಕಾಣಿಸದ ಸಂಗೀತಾ-ಪ್ರತಾಪ್​ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆಯೇ? ಎಂಬ ಅನುಮಾನಗಳು ವೀಕ್ಷಕರಲ್ಲಿ ಮೂಡಿದೆ.

ಇಂದು ನಡೆಯಲಿರುವ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ? ಯಾರು ಉಳಿಯಲಿದ್ದಾರೆ? ಯಾರಿಗೆ ಕಿಚ್ಚನ ಕ್ಲಾಸ್, ಚಪ್ಪಾಳೆ​ ಸಿಗಲಿದೆ ಎಂಬದುನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net