ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಅಂತ್ಯ: ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ, ಇಲ್ಲಿದೆ ಪೂರ್ಣ ಮಾಹಿತಿ…

Titan Submersible
Published on

ನ್ಯೂಯಾರ್ಕ್​: ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್​ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.

ಟೈಟಾನ್​ ಹೆಸರಿನ ನೌಕೆಯು ನೀರಿನ ಸೆಳೆತಕ್ಕೆ ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಮುದ್ರದ ಆಳವಾಗಿ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕೆಳಕ್ಕೆ ತಳ್ಳುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಗುರುವಾರ ರಿಮೋಟ್​ ಕಂಟ್ರೋಲ್​ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಯುಎಸ್​ ಕರಾವಳಿ ಪಡೆ ಈ ನಿರ್ಣಯಕ್ಕೆ ಬಂದಿದೆ. ಸಾಗರದ ಸುಮಾರು 1600 ಅಡಿ (488 ಮೀಟರ್​) ಆಳದಲ್ಲಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾಗಿವೆ.

ಸಾವಿಗೆ ಸಂತಾಪ

ಈ ಬಗ್ಗೆ ಅಮೆರಿಕ ರೀರ್​ ಅಡ್ಮಿರಲ್​ ಜಾನ್​ ಮೌಗರ್​ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುವಾಗ ಯುಎಸ್​ ಕರಾವಳಿ ಪಡೆ ಮತ್ತು ಇಡೀ ಕಾರ್ಯಾಚರಣೆಯ ತಂಡದ ಪರವಾಗಿ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತಪಟ್ಟಿರುವ ಸುದ್ದಿಯನ್ನು ಈಗಾಗಲೇ ಅವರ ಕುಟುಂಬಗಳಿಗೆ ತಿಳಿಸಿರುವುದಾಗಿ ಹೇಳಿದರು.

ನಾಪತ್ತೆಯಾಗಿದ್ದ ಐವರ ಪತ್ತೆಗಾಗಿ ಇಡೀ ವಿಶ್ವವೇ ಪ್ರಾರ್ಥಿಸುತ್ತಿತ್ತು. ಆದರೆ, ಕೊನೆಗೂ ಅವರ ಸುಳಿವು ಸಿಗಲೇ ಇಲ್ಲ. ಕಳೆದ ಭಾನುವಾರ ಈ ಘಟನೆ ನಡೆಯಿತು. ಕೆನಾಡದ ನ್ಯೂಫೌಂಡ್​ಲ್ಯಾಂಡ್​ ಕರಾವಳಿ ಭಾಗದಿಂದ ಸುಮಾರು 400 ಮೈಲಿ ದೂರದಲ್ಲಿ ಟೈಟಾನಿಕ ಹಡಗಿನ ಅವಶೇಷಗಳು ಬಿದ್ದಿವೆ. ಅದನ್ನು ನೋಡಲು ಟೈಟಾನ್​ ಹೆಸರಿನ ಜಲಾಂತರ್ಗಾಮಿ ನೌಕೆಯಲ್ಲಿ ಹೋದ ಐವರು ಇದೀಗ ಮೃತಪಟ್ಟಿದ್ದಾರೆ. ಅವರ ಪತ್ತೆಗಾಗಿ ಕಳೆದ ಭಾನುವಾರದಿಂದ ಯುಎಸ್​ ಮತ್ತು ಕೆನಡಾ ಕರಾವಳಿ ಪಡೆ ದಿನದ 24 ಗಂಟೆ ಯುಎಸ್​ ಕನೆಕ್ಟಿಕಟ್‌ ರಾಜ್ಯದ ಎರಡು ಪಟ್ಟು ಗಾತ್ರದ ಪ್ರದೇಶದಲ್ಲಿ ನಿರಂತರ ಕಾರ್ಯಚರಣೆ ನಡೆಸಿತು. ನೌಕೆಯಲ್ಲಿ 96 ಗಂಟೆಗೆ ಆಗುವಷ್ಟು ಆಮ್ಲಜನಕ ಪೂರೈಕೆ ಇತ್ತು. ಒಂದು ಕಡೆ ಆಮ್ಲಜನಕ ಖಾಲಿಯಾಗುತ್ತಿರುವ ಆತಂಕದ ನಡುವೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು. ಆದರೆ, ಅಂತಿಮವಾಗಿ ನೌಕೆಯ ಅವಶೇಷಗಳು ಪತ್ತೆಯಾಗಿದ್ದು, ಅದರಲ್ಲಿದ್ದ ಐವರು ಮೃತಪಟ್ಟಿರುವುದು ಖಚಿತವಾಗಿದೆ.

ಬಡಿಯುವ ಶಬ್ದ

ಇದಕ್ಕೂ ಮುನ್ನ ಯುಎಸ್​ ಕರಾವಳಿ ಪಡೆ ಸಾಗರದ ಆಳದಲ್ಲಿ ಬಡಿಯುವ ಶಬ್ಧವನ್ನು ಗುರುತಿಸಿತ್ತು. ನೀರಿನ ಒಳಗಿನ ಶಬ್ಧವನ್ನು ಗುರುತಿಸುವ ಸೋನಾರ್​ ಅನ್ನು ರಕ್ಷಣಾ ಪಡೆಗಳು ಬಳಸಿದ್ದು, ನೌಕೆ ನಾಪತ್ತೆಯಾದ ಸ್ಥಳದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ದ ಕೇಳಿಬರುತ್ತಿದೆ ಎಂದು ತಿಳಿಸಿದ್ದವು. ಇದರಿಂದ ಐವರು ಇನ್ನು ಜೀವಂತವಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ಅಲ್ಲಿ ಕೇಳಿಬರುತ್ತಿದ್ದ ಶಬ್ದಕ್ಕೂ ನೌಕೆಗೂ ಸಂಬಂಧವಿಲ್ಲ ಎಂಬುದು ನಂತರದಲ್ಲಿ ತಿಳಿಯಿತು.

ನೌಕೆಯಲ್ಲಿದ್ದ ಐವರು ಯಾರು?

ಇನ್ನು ನಾಪತ್ತೆಯಾದ ಟೈಟಾನ್​ ನೌಕೆಯಲ್ಲಿ ಯುನೈಟೆಡ್​ ಕಿಂಗ್​​ಡಮ್​ನ ಆಕ್ಷನ್ ಗ್ರೂಪ್ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ಮತ್ತು ಸಾಹಸಪ್ರಿಯ ಹಮೀಶ್​ ಹರ್ಡಿಂಗ್​ (58), ಫ್ರೆಂಚ್ ಕಡಲ ತಜ್ಞ ಪೌಲ್​ ಹೆನ್ರಿ ನರ್ಜೋಲೆಟ್ (77), ವಾಷಿಂಗ್ಟನ್ ಮೂಲದ ಓಷನ್‌ಗೇಟ್ ಕಂಪನಿ ಎವೆರೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟಾಕ್ಟನ್ ರಶ್ (61), ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದ ದಾವೂದ್​ (48) ಮತ್ತು ಆತನ ಪುತ್ರ ಸುಲೇಮಾನ್​ ದಾವೂದ್​ (19) ಇದ್ದರು.

ಟೈಟಾನ್​ ನೌಕೆಯ ಬಗ್ಗೆ

ಕಾಣೆಯಾದ ಟೈಟಾನ್​ ಜಲಾಂತರ್ಗಾಮಿ ನೌಕೆ 6.7 ಮೀಟರ್​ ಉದ್ದವಿತ್ತು. ಕಾರ್ಬನ್​ ಫೈಬರ್​ ಮತ್ತು ಟೈಟಾನಿಯಂನಿಂದ ವಿನ್ಯಾಸ ಮಾಡಲಾಗಿತ್ತು. ಓರ್ವ ಪೈಲಟ್​ ಮತ್ತು ನಾಲ್ವರು ಸಿಬ್ಬಂದಿಯನ್ನು ಗಿರಷ್ಠ 4000 ಮೀಟರ್ ಆಳ (13,120 ಅಡಿ)ದವರೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿತ್ತು. ಓಷನ್​ಗೇಟ್​ ವೆಬ್‌ಸೈಟ್‌ ಪ್ರಕಾರ, ನೌಕೆಯಲ್ಲಿದ್ದ ಆನ್‌ಬೋರ್ಡ್ ಸಿಸ್ಟಮ್, ಸಿಬ್ಬಂದಿಯ ಆರೋಗ್ಯವನ್ನು ಪತ್ತೆಹಚ್ಚಲು ಮತ್ತು ಪೈಲಟ್‌ಗೆ ಅವರೋಹಣವನ್ನು ಗುರುತಿಸಿ, ಸುರಕ್ಷಿತವಾಗಿ ಮೇಲ್ಮೈಗೆ ಮರಳಲು ಸಾಕಷ್ಟು ಸಮಯದ ಮುಂಚೆಯೇ ಆರಂಭಿಕ ಎಚ್ಚರಿಕೆಯನ್ನು ಪತ್ತೆಹಚ್ಚುವ ವ್ಯವಸ್ಥೆಯೂ ಇತ್ತು ಎಂದು ತಿಳಿಸಿದೆ.

ಜೂನ್​ 18ರಂದು ಟೈಟಾನಿಕ್ ಹಡಗು ಇರುವ ಕಡೆಗೆ ಧುಮುಕಲು ಪ್ರಾರಂಭಿಸಿದ ಸುಮಾರು 1 ಗಂಟೆ 45 ನಿಮಿಷಗಳ ನಂತರ ಟೈಟಾನ್​ ನೌಕೆ ತನ್ನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿತು.

ಟೈಟಾನಿಕ್​ ಘಟನೆ ಹಿನ್ನೆಲೆ

1912ರ ಏಪ್ರಿಲ್​ 15ರಂದು ಟೈಟಾನಿಕ್​ ದುರಂತ ಸಂಭವಿಸಿತು. ಸೌತಾಂಪ್ಟನ್‌ನಿಂದ ನ್ಯೂಯಾರ್ಕ್ ನಗರಕ್ಕೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್​ ಹಡಗು ತನ್ನ ಮೊದಲ ಪ್ರಯಾಣ ಆರಂಭಿಸಿತ್ತು. ಕೆನಡಾ ದೇಶದ ನ್ಯೂಫೌಂಡ್‌ಲ್ಯಾಂಡ್‌ ಕರಾವಳಿಯಿಂದ 400 ಮೈಲು ದೂರದಲ್ಲಿ ಟೈಟಾನಿಕ್‌ ಹಡಗು ದುರಂತದಲ್ಲಿ ಮುಳುಗಡೆಯಾಯಿತು. ಒಂದು ಶತಮಾನಕ್ಕೂ ಅಧಿಕ ಸಮಯದಲ್ಲಿ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷಗಳು ಬಿದ್ದಿವೆ. ಬೃಹತ್ ಮಂಜುಗಡ್ಡೆಗೆ ಟೈಟಾನಿಕ್ ಅಪ್ಪಳಿಸಿದ್ದ ಕಾರಣ 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಕೇವಲ 700 ಜನರು ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net