ರಾಜ್ಯದಲ್ಲಿ ಜಲವಿದ್ಯುತ್ ಕ್ಷೀಣ, ಥರ್ಮಲ್​ನತ್ತ ಗಮನ; ಮುಂಗಾರು ವೈಫಲ್ಯದಿಂದ ಸೃಷ್ಟಿಯಾದ ಆತಂಕ

Current
Published on

ಜಗನ್ನಾಥ ದೇಸಾಯಿ
ಗಂಗಾವತಿ: ಮುಂಗಾರು ಮಳೆ ವೈಫಲ್ಯ ರಾಜ್ಯದ ಕೃಷಿ ವಲಯವನ್ನಷ್ಟೇ ಅಲ್ಲ, ವಿದ್ಯುತ್ ಲಭ್ಯತೆಗೆ ಪೆಟ್ಟು ಕೊಡುವ ಹಂತಕ್ಕೆ ತಂದು ನಿಲ್ಲಿಸಿದೆ. ಜಲವಿದ್ಯುತ್ ಕೇಂದ್ರಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ಸದ್ಯಕ್ಕೆ ಸೌರ ಮತ್ತು ಪವನ ವಿದ್ಯುತ್ ಕೈಹಿಡಿದಿವೆ. ಆದರೂ, ಭವಿಷ್ಯದಲ್ಲಿ ವಿದ್ಯುತ್ ಬೇಡಿಕೆ ನೀಗಿಸಲು ಕರ್ನಾಟಕ ವಿದ್ಯುತ್​ಚ್ಛಕ್ತಿ ಪ್ರಸರಣ ನಿಗಮ(ಕೆಪಿಸಿ) ಥರ್ಮಲ್ ಕೇಂದ್ರಗಳನ್ನು ಸಜ್ಜುಗೊಳಿಸಲು ಮುಂದಾಗಿದೆ.

ಜಲವಿದ್ಯುತ್​ಗೆ ಕಂಟಕ

ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳಕಚ್ಚಿರುವುದು ವಿದ್ಯುತ್ ಉತ್ಪಾದನೆಗೆ ಹಿನ್ನಡೆಯಾಗುವಂತೆ ಮಾಡಿದೆ. ಜಲವಿದ್ಯುತ್ ಘಟಕಗಳಿಂದ ಸದ್ಯ ಶರಾವತಿ ಜಲವಿದ್ಯುತ್ ಕೇಂದ್ರದಲ್ಲಿ 1035 ಮೆಗಾವಾಟ್ ಸಾಮರ್ಥ್ಯಕ್ಕೆ ಪ್ರತಿಯಾಗಿ ಕೇವಲ 105 ಮೆವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇಲ್ಲಿ 10 ಘಟಕಗಳಲ್ಲಿ ನಾಲ್ಕು ನೀರಿನ ಕೊರತೆಯಿಂದ ಸ್ಥಗಿತಗೊಂಡಿವೆ. ವಾರಾಹಿ ಜಲವಿದ್ಯುತ್ ಕೇಂದ್ರದಲ್ಲಿ 450 ಮೆವಾ ಸಾಮರ್ಥ್ಯವಿದ್ದು, ನಾಲ್ಕು ಘಟಕಗಳ ಪೈಕಿ ಒಂದರಲ್ಲಿ ಮಾತ್ರ 11 ಮೆವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ನಾಗಝುರಿ ವಿದ್ಯುತ್ ಕೇಂದ್ರದಲ್ಲಿ 900 ಮೆವಾಗೆ ಪ್ರತಿಯಾಗಿ 477 ಮೆವಾ ಉತ್ಪಾದಿಸುತ್ತಿದ್ದರೆ, ಜೋಗದಲ್ಲಿ 46 ಮೆವಾ ಮಾತ್ರ ವಿದ್ಯುತ್ ದೊರೆಯುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಹೊಣೆ ಹೊತ್ತಿರುವ ಕೆಪಿಸಿ ಒತ್ತಡದಲ್ಲಿ ಸಿಲುಕಿದೆ.

ಥರ್ಮಲ್ ಪವರ್

ರಾಜ್ಯದ ರಾಯಚೂರಿನ ಶಕ್ತಿನಗರ, ಯರಮರಸ್ ಹಾಗೂ ಬಳ್ಳಾರಿಯ ಕುಡಿತಿನಿಯಲ್ಲಿರುವ ಥರ್ಮಲ್ ಘಟಕಗಳು ತುರ್ತು ಸಂದರ್ಭದಲ್ಲಿ ರಾಜ್ಯದ ವಿದ್ಯುತ್ ಬೇಡಿಕೆ ನೀಗಿಸಲು ಸದಾ ಮುಂಚೂಣಿಯಲ್ಲಿವೆ. ಈಗಿನ ಜಲವಿದ್ಯುತ್ ಉತ್ಪಾದನೆಯಲ್ಲಿ ಎದುರಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಪಿಸಿ ಮುಂದಾಗಿದೆ. ಅಂತೆಯೇ ಮುಂಗಾರು ಮಾಸಾಂತ್ಯದವರೆಗೆ ಕೈಕೊಟ್ಟರೆ ಆ ಸಂದರ್ಭದಲ್ಲಿ ರಾಜ್ಯದ ಮೂರು ಥರ್ಮಲ್ ವಿದ್ಯುತ್ ಕೇಂದ್ರಗಳಿಂದ ಬೇಡಿಕೆಯ ವಿದ್ಯುತ್ ಪಡೆಯಲು ಅಗತ್ಯ ಸಿದ್ಧತೆಗೆ ತೊಡಗಿದೆ. ಸದ್ಯ ಶಕ್ತಿನಗರದ ಆರ್​ಟಿಪಿಎಸ್​ನಲ್ಲಿ ಆರು ಘಟಕಗಳಿಂದ 820 ಮೆವಾ, ವೈಟಿಪಿಎಸ್ ನಲ್ಲಿ 950 ಮೆವಾ ಹಾಗೂ ಬಿಟಿಪಿಎಸ್ ನಲ್ಲಿ 1100 ಮೆವಾ ವಿದ್ಯುತ್ ಉತ್ಪಾದಿಸುತ್ತಿದ್ದು, ಭವಿಷ್ಯದಲ್ಲಿ ಅಗತ್ಯ ಬೀಳುವ ವಿದ್ಯುತ್ ಉತ್ಪಾದನೆಗೆ ಪೂರಕವಾಗಿ ಕಲ್ಲಿದ್ದಲು ಸಂಗ್ರಹಣೆಗೆ ಕೆಪಿಸಿ ಮುಂದಾಗಿದೆ. ಕಲ್ಲಿದ್ದಲು ಪೂರೈಕೆಯೂ ನಿರಂತರವಾಗಿರುವಂತೆ ಗಮನಹರಿಸಲಾಗುತ್ತಿದೆ.

ಸೌರ, ಪವನಶಕ್ತಿ ಅಭಯ

ರಾಜ್ಯದಲ್ಲಿ ಎದುರಾಗಿರುವ ವಿದ್ಯುತ್ ಕ್ಷಾಮದ ಭೀತಿ ಸದ್ಯಕ್ಕೆ ಸೌರಶಕ್ತಿ ಮತ್ತು ಪವನ ವಿದ್ಯುತ್ ಕೇಂದ್ರಗಳಿಂದ ಕೊಂಚ ಮಟ್ಟಿಗೆ ನಿರಾಳತೆ ಮೂಡಿಸಿದೆ. ರಾಜ್ಯದ ದೈನಂದಿನ ವಿದ್ಯುತ್ ಬೇಡಿಕೆ ಪ್ರಮಾಣವು 13 ಸಾವಿರ ಮೆವಾವರೆಗಿದೆ. ಈ ಪೈಕಿ ಸೌರಶಕ್ತಿಯಿಂದ 5-6 ಸಾವಿರ ಮೆವಾ ಹಾಗೂ ಪವನ ವಿದ್ಯುತ್ ನಿಂದ 2,600 ಮೆವಾವರೆಗೆ ವಿದ್ಯುತ್ ಲಭ್ಯವಾಗುತ್ತಿದೆ.

ಜಲವಿದ್ಯುತ್ ಕೇಂದ್ರಗಳಲ್ಲಿ ನೀರಿನ ಕೊರತೆಯಿಂದ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗುತ್ತಿರುವುದು ನಿಜ. ಜೂನ್ ಅಂತ್ಯದೊತ್ತಿಗೆ ಮುಂಗಾರು ಚುರುಕುಗೊಳ್ಳುವ ಲಕ್ಷಣವಿದೆ. ಆದರೂ ಥರ್ಮಲ್ ಘಟಕಗಳಿಗೆ ಅಗತ್ಯವಿರುವಷ್ಟು ಕಲ್ಲಿದ್ದಲು ಸಂಗ್ರಹಣೆ ಮತ್ತು ಪೂರೈಕೆಗೆ ಒತ್ತು ಕೊಡಲಾಗುತ್ತಿದೆ.
| ಪಂಕಜ್ ಕುಮಾರ್ ಪಾಂಡೆ
ಎಂಡಿ, ಕೆಪಿಸಿ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net