ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

Bryan Johnson
Published on

ನವದೆಹಲಿ: ಚಿರ ಯುವಕನಂತೆಯೇ ಕಾಣಿಸಬೇಕೆಂಬ ಆಸೆ ಹಲವರಲ್ಲಿ ಇದ್ದೇ ಇರುತ್ತದೆ. ಆದರೆ ಅದು ಅಸಾಧ್ಯ, ವಯಸ್ಸನ್ನು ಹಿಡಿದಿಡಲು ಯಾರಿಗೂ ಸಾಧ್ಯವಿಲ್ಲ. ಅದಾಗ್ಯೂ ಇಲ್ಲೊಬ್ಬ ಶತಕೋಟ್ಯಧಿಪತಿ ತಾನು ಯಾವಾಗಲೂ ಯಂಗ್ ಆಗಿಯೇ ಕಾಣಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೋಟ್ಯಂತರ ಮೊತ್ತವನ್ನು ಖರ್ಚು ಮಾಡಿದ್ದಾನೆ.

ಯುಎಸ್​ಎನ ಕ್ಯಾಲಿಫೋರ್ನಿಯಾದ ಬ್ರಿಯಾನ್​ ಜಾನ್​ಸನ್ ಎಂಬ ಉದ್ಯಮಿ ಇಂಥದ್ದೊಂದು ಸಾಹಸಕ್ಕೆ ಮುಂದಾಗಿದ್ದು, ಕೋಟ್ಯಂತರ ಮೊತ್ತವನ್ನೂ ಖರ್ಚು ಮಾಡಿದ್ದಾನೆ. ಅದಕ್ಕಾಗಿ ಈತ ತನ್ನ ಮಗನ ರಕ್ತವನ್ನೇ ವರ್ಗಾವಣೆ ಮಾಡಿಕೊಂಡಿದ್ದ. ಆದರೆ ಕೊನೆಗೂ ಆ 'ಬ್ಲಡ್ ಬಾಯ್' ಪ್ರಾಜೆಕ್ಟ್​ ಕೊನೆಗೊಂಡಿದೆ.

ಯಂಗ್ ಆಗಿಯೇ ಇರಬೇಕು ಎಂದು ಹತ್ತು ವರ್ಷಗಳಿಂದ ಪ್ರಯತ್ನದಲ್ಲಿದ್ದ ಬ್ರಿಯಾನ್ ಜಾನ್​ಸನ್ ಅದಕ್ಕಾಗಿ ಇತ್ತೀಚೆಗೆ ತನ್ನ 17 ವರ್ಷದ ಪುತ್ರ ತಾಲ್ಮೇಜ್​ನ ರಕ್ತವನ್ನೂ ವರ್ಗಾವಣೆ ಮಾಡಿಸಿಕೊಂಡಿದ್ದ. ಅಲ್ಲದೆ ತಾರುಣ್ಯದ ಕುರಿತ ತನ್ನ ಪ್ರಯೋಗಕ್ಕಾಗಿ ಬ್ರಿಯಾನ್​ ತನ್ನ 70 ವರ್ಷದ ತಂದೆ, 17 ವರ್ಷದ ಪುತ್ರನ ರಕ್ತವನ್ನೂ ವರ್ಗಾವಣೆ ಮಾಡಿದ್ದ. ಪುತ್ರನ ಬ್ಲಡ್​ ಪ್ಲಾಸ್ಮಾ ತನ್ನೊಳಗೂ, ತನ್ನದ್ದನ್ನು ತಂದೆಯ ದೇಹಕ್ಕೆ ಹಾಗೂ ತಂದೆಯದ್ದನ್ನು ತನ್ನ ಪುತ್ರನ ದೇಹಕ್ಕೆ ವರ್ಗಾವಣೆ ಮಾಡಿ ನೋಡಿದ್ದ.

ಕಿರಿಯರ ಬ್ಲಡ್​ ಪ್ಲಾಸ್ಮಾ ಹಿರಿಯರ ತಾರುಣ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದರೂ ಬ್ರಿಯಾನ್ ವಿಷಯದಲ್ಲಿ ಇದು ಸಫಲವಾಗಿಲ್ಲ.​ ಇನ್ನು ಈ ರಕ್ತ ವರ್ಗಾವಣೆಯಿಂದ ಬ್ರಿಯಾನ್ ಪುತ್ರನ ವಿಷಯದಲ್ಲೂ ಯಾವುದೇ ಪರಿಣಾಮ ಕಂಡುಬಂದಿಲ್ಲ ಹಾಗೂ ಬ್ರಿಯಾನ್​ ತಂದೆಯ ವಿಷಯದಲ್ಲಿ ಏನಾಯ್ತು ಎಂಬ ಮಾಹಿತಿ ಬಹಿರಂಗಗೊಂಡಿಲ್ಲ. ಬ್ರಿಯಾನ್​ ಈ ಪ್ರಯೋಗಕ್ಕಾಗಿ ತನ್ನದೊಂದು ಕಂಪನಿಯನ್ನು 8 ಬಿಲಿಯನ್ ಡಾಲರ್​ಗೆ ಮಾರಾಟ ಮಾಡಿದ್ದ.

ಬ್ರಿಯಾನ್ ಯಂಗ್ ಆಗಿಯೇ ಕಾಣಿಸಿಕೊಳ್ಳಲು ರಕ್ತ ವರ್ಗಾವಣೆ ಮಾತ್ರವಲ್ಲದೆ, ದಿನವೂ 80 ವಿಟಮಿನ್ಸ್​ ಮತ್ತು ಮಿನರಲ್ಸ್​ ಸೇವಿಸುತ್ತಿದ್ದು, ತಿಂಗಳಿಗೆ 31.5 ಕೆ.ಜಿ.ಯಷ್ಟು ತರಕಾರಿ ತಿನ್ನುತ್ತಿದ್ದಾರೆ. 25 ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುತ್ತಿದ್ದು, ಅದಕ್ಕೆಂದೇ ನಿತ್ಯ 1 ಗಂಟೆ ಮೀಸಲಿಟ್ಟಿದ್ದಾರೆ. ತನ್ನ ಕರುಳಿನ ಆರೋಗ್ಯದ ಬಗ್ಗೆ 33 ಸಾವಿರ ಫೋಟೋಗಳನ್ನು ದಾಖಲಿಸಿಕೊಂಡಿದ್ದಾರೆ.

ಬ್ರಿಯಾನ್ ಆರೋಗ್ಯ, ದಿನನಿತ್ಯದ ಜೀವನ ಇತ್ಯಾದಿಗಳ ಮೇಲೆ ನಿಗಾ ಇರಿಸಲೆಂದೇ 30 ವೈದ್ಯರ ತಂಡವನ್ನು ನಿಯೋಜಿಸಿಕೊಳ್ಳಲಾಗಿದೆ. 45 ವರ್ಷದವನಾದ ನನ್ನ ಹೃದಯ ಸದ್ಯ 37 ವರ್ಷದವರಂತೆ, ಚರ್ಮ 28 ವರ್ಷದವರಂತೆ ಇದ್ದು, ತಾನು 18 ವರ್ಷದವರ ಫಿಟ್​​ನೆಸ್ ಹೊಂದಿರುವುದಾಗಿ ಬ್ರಿಯಾನ್​ ಹೇಳಿಕೊಂಡಿದ್ದಾರೆ. ತನ್ನ ಬ್ಲಡ್ ಬಾಯ್​ ಪ್ರಾಜೆಕ್ಟ್ ವಿಫಲಗೊಂಡಿದ್ದರೂ ಇದಕ್ಕೆಲ್ಲ ವರ್ಷಕ್ಕೆ 16.45 ಕೋಟಿ ರೂ. ಖರ್ಚು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net