ಕಣ್ಣು ಮಿಟುಕಿಸಲಾಗದ್ದಕ್ಕೇ ಬ್ಯಾಂಕ್ ಖಾತೆ ಸಿಗದಂತಾದ ಮಹಿಳೆ!

Pragya
Published on

ಬೆಂಗಳೂರು: ಚಿಟಿಕೆ ಹೊಡೆಯುವುದರೊಳಗೆ, ಕಣ್ಣು ಮಿಟುಕಿಸುವಷ್ಟರಲ್ಲಿ ಏನನ್ನಾದರೂ ಪಡೆಯಬಹುದು ಎಂದು ಕೆಲವೊಮ್ಮೆ ಮಾತಿಗೆ ಹೇಳುವುದಿದೆ. ಆದರೆ ಇಲ್ಲೊಬ್ಬರು ಮಹಿಳೆ ಕಣ್ಣು ಮಿಟುಕಿಸಲಾಗದ ಒಂದೇ ಕಾರಣಕ್ಕೆ ಬ್ಯಾಂಕ್ ಖಾತೆಯನ್ನು ಪಡೆಯಲಾಗದ ಪರಿಸ್ಥಿತಿ ಉಂಟಾಗಿದೆ.

ಲೇಖಕಿ, ಮೋಟಿವೇಷನಲ್ ಸ್ಪೀಕರ್, ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಪ್ರಾಗ್ಯಾ ಪ್ರಸುನ್ ಸಿಂಗ್ ಎಂಬಾಕೆ ಬ್ಯಾಂಕ್ ಖಾತೆ ಪಡೆಯಲಾಗದ ತಮ್ಮ ಪರಿಸ್ಥಿತಿ ಬಗ್ಗೆ ತೀವ್ರ ಬೇಸರದಿಂದ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅದೂ ಬರೀ ಕಣ್ಣು ಮಿಟುಕಿಸಲು ಆಗುವುದಿಲ್ಲ ಎಂಬ ಕಾರಣಕ್ಕೇ ಬ್ಯಾಂಕ್ ಅವರಿಗೆ ಖಾತೆ ನೀಡಲಾಗದು ಎಂದು ಹೇಳಿದೆಯಂತೆ.

ಆಸಿಡ್ ದಾಳಿಯಿಂದ ಬದುಕುಳಿದವಳಾಗಿರುವ ನಾನು ಗೌರವಯುತ ಜೀವನವನ್ನು ನಡೆಸುವುದನ್ನು ತೊಂದರೆ ಆಗಬಾರದು. ಕೆವೈಸಿ ಪ್ರಕ್ರಿಯೆಗಾಗಿ ನಾನು ಕಣ್ಣು ಮಿಟುಕಿಸಲು ಸಾಧ್ಯವಿಲ್ಲದ ಕಾರಣ ನನಗೆ ಬ್ಯಾಂಕ್ ಖಾತೆಯನ್ನು ನಿರಾಕರಿಸಿರುವುದು ಅನ್ಯಾಯವಾಗಿದೆ ಎಂದು ಹೇಳಿಕೊಂಡಿರುವ ಪ್ರಾಗ್ಯಾ ತಮ್ಮ ಈ ನೋವಿನ ಕುರಿತ ಟ್ವೀಟನ್ನು ನಟ ಶಾರುಖ್ ಖಾನ್ ಅವರ ಟ್ವಿಟರ್​ ಹ್ಯಾಂಡಲ್​ಗೂ ಮೆನ್ಷನ್ ಮಾಡಿದ್ದಾರೆ. ನನಗೆ ಕಣ್ಣು ಮಿಟುಕಿಸಲಾಗದು ನಿಜ, ಆದರೆ ಆ್ಯಸಿಡ್ ದಾಳಿ ಸಂತ್ರಸ್ತರಿಗೂ ಈ ಜಗತ್ತಿನಲ್ಲಿ ಒಳಗೊಳ್ಳುವ ಅವಕಾಶಕ್ಕಾಗಿ ನನಗೆ ಸಹಾಯ ಬೇಕು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net