ಪಟ್ನಾ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟಿ ನೇಹಾ ಶರ್ಮಾ ಒಂದಿಲ್ಲೊಂದು ವಿಚಾರಗಳಿಗೆ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಫೋಟೋಶೂಟ್ ಮಾಡಿಸುವ ಮೂಲಕ ಸುದ್ದಿಯಾಗಿದ್ದ ನಟಿ ನೇಹಾ ಶರ್ಮಾ ಇದೀಗ ಬೇರೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆಯುತ್ತಿದ್ದು, ನಟಿ ರಾಜಕೀಯ ಪ್ರವೇಶದ ಸುದ್ದಿಗೆ ಪುಷ್ಠಿ ನೀಡಿದೆ.
ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಭರಾಟೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಅಭ್ಯರ್ಥಿಗಳು ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಇನ್ನು ಚಿತ್ರರಂಗಕ್ಕೂ ರಾಜಕೀಯಕ್ಕೂ ಎಲ್ಲಿಲ್ಲದ ನಂಟು ಎಂದು ಹೇಳಬಹುದಾಗಿದೆ. ಚುನಾವಣೆಯ ಸಮಯದಲ್ಲಿ ಖ್ಯಾತ ನಟ-ನಟಿಯರು ಅಭ್ಯರ್ಥಿಗಳ ಪರ ಮತಯಾಚಿಸುವುದು ಸಾಮಾನ್ಯವಾಗಿದೆ. ಇದೀಗ ಅದಕ್ಕೆ ಪೂರಕವೆಂಬಂತೆ ನಟಿ ನೇಹಾ ಶರ್ಮಾ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸುವ ಮೂಲಕ ರಾಜಕೀಯ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೈಲಿಗೆ ಸಿಲುಕಿ ಮೂವರು ಯುವಕರ ದುರ್ಮರಣ; ಛಿದ್ರವಾದ ಮೃತದೇಹಗಳು
ಬಾಲಿವುಡ್ ನಟಿ ನೇಹಾ ಶರ್ಮಾ ತಂದೆ ಅನಿಲ್ ಶರ್ಮಾ ಬಿಹಾರದ ಭಗಲ್ಪುರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇತ್ತೀಚಿಗೆ ನಟಿ ನೇಹಾ ಶರ್ಮಾ ತಂದೆಯ ಪರ ಭರ್ಜರಿ ಪ್ರಚಾರ ಮಾಡುವ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ನಟಿ ನೇಹಾ ಶರ್ಮಾ ಭಗಲ್ಪುರ ಮಾತ್ರವಲ್ಲದೇ ಬಂಕಾ, ಕಿಶನ್‌ಗಂಜ್, ಕತಿಹಾರ್ ಮತ್ತು ಪುರ್ನಿಯಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿರುವ ಪ್ರಕಾರ ನಟಿ ನೇಹಾ ಶರ್ಮಾ 2025ರಲ್ಲಿ ನಡೆಯುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಲು ಈ ಮೂಲಕ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಜನಪ್ರಿಯತೆಯನ್ನು ನೆಚ್ಚಿಕೊಂಡು ರಾಜಕೀಯ ಪ್ರವೇಶಿಸುತ್ತಿರುವ ನಟಿಗೆ ಜನರು ಆಶೀರ್ವದಿಸುತ್ತಾರ ಎಂದು ಕಾದು ನೋಡಬೇಕಿದೆ.