ನೂರು ರೂ. ಕೊಟ್ಟು 2 ಮಾಂಗಲ್ಯ ಸರ ಸುಲಿಗೆ: ಖದೀಮರ ವಿನೂತನ ಕೈಚಳಕಕ್ಕೆ ಬೆಚ್ಚಿಬಿದ್ದ ಆನೇಕಲ್ ಮಂದಿ

snatch gool chain
Published on

ಆನೇಕಲ್: ಪೂಜೆ ನೆಪದಲ್ಲಿ ಮಂಪರು ಬರೆಸಿ ಮಾಂಗಲ್ಯ ಸರವನ್ನು ಸುಲಿಗೆ ಮಾಡಿರುವ ಆಘಾತಕಾರಿ ಘಟನೆ ಆನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಮತ್ತು ಜಂಗಲ್ ಪಾಳ್ಯದಲ್ಲಿ ನಡೆದಿದೆ.

ಜಂಗಲ್ ಪಾಳ್ಯ ನಿವಾಸಿ ವಿಜಯಮ್ಮ ಬಳಿ 110 ಗ್ರಾಂ ಮತ್ತು ಬ್ಯಾಗಡದೇನಹಳ್ಳಿ ನಿವಾಸಿ ಮುನಿರತ್ನಮ್ಮ ಬಳಿ 45 ಗ್ರಾಂ ಮಾಂಗಲ್ಯ ಸರವನ್ನು ಖದೀಮರು ಕಸಿದುಕೊಂಡು ಹೋಗಿದ್ದಾರೆ. ಹೊಸ ಮಾದರಿಯಲ್ಲಿ ಈ ದುಷ್ಕೃತ್ಯ ಎಸಗಿದ್ದು, ಖದೀಮರ ಕೈಚಳಕ ಸ್ಥಳೀಯ ಜನರನ್ನು ಆತಂಕಕ್ಕೆ ದೂಡಿದೆ.

ವಿಜಯಮ್ಮ ನೀಡಿದ ದೂರಿನಲ್ಲಿ ಏನಿದೆ?

ಜುಲೈ 13ರಂದು ಮಧ್ಯಾಹ್ನ 12.30ಕ್ಕೆ ಸರ ಕಳೆದುಕೊಂಡ ವಿಜಯಮ್ಮ ದೂರು ನೀಡಿದ್ದಾರೆ. ನಾನು ಮತ್ತು ನನ್ನ ಮಗ ವಿವೇಕ್​ನೊಂದಿಗೆ ವಾಸವಾಗಿದ್ದೇನೆ. ನನ್ನ ಮಗ ಬೆಂಗಳೂರು ನಗರದ ಎಂ.ಜಿ. ರಸ್ತೆಯಲ್ಲಿ ಸಾಫ್ಟ್​ವೇರ್ ಕಂಪನಿಯಲಿ ಕೆಲಸ ಮಾಡುತ್ತಿದ್ದಾರೆ. ನಾನು ಒಬ್ಬಳೆ ಮನೆಯಲ್ಲಿ ಇರುತ್ತೇನೆ. ಹೀಗಿರುವಾಗ ಜುಲೈ 13 ರಂದು ಬೆಳಗ್ಗೆ 8.30ಕ್ಕೆ ನನ್ನ ಮಗ ಎಂದಿನಂತೆ ಕೆಲಸಕ್ಕೆ ಹೋದನು. ನಾನು ಮನೆಯಲಿ ಒಬ್ಬಳೇ ಇದ್ದೆನು.

ಬೆಳಗ್ಗೆ ಸುಮಾರು 11.45ರ ಸಮಯದಲ್ಲಿ ನಾನು ನಮ್ಮ ಮನೆಯ ಮುಂದೆ ನಮ್ಮ ಬಟ್ಟೆಗಳನ್ನು ತೊಳೆದು ಒಣಗಲು ಹಾಕುತ್ತಿದ್ದೆನು. ಆ ವೇಳೆ ಯಾರೋ ಇಬ್ಬರು ಒಂದು ಬೈಕಿನಲ್ಲಿ ನಮ್ಮ ಮನೆಯ ಬಳಿ ಬಂದರು. ಇಬ್ಬರ ಪೈಕಿ ಒಬ್ಬ ಆಸಾಮಿ ನನ್ನ ಬಳಿ ಬಂದು ಆತನು ತಂದಿದ್ದ ಬ್ಯಾಗಿನಿಂದ ಬಾಳೆಹಣ್ಣು, ತೆಂಗಿನಕಾಯಿ ಮತ್ತು ಸಾವಂತಿಗೆ ಹೂವನ್ನು ತೆಗೆದು, ಇದನ್ನು ಹಿಡಿದುಕೊಂಡು ನಿಮ್ಮ ತಾಳಿಯನ್ನು ಇದ್ದಕ್ಕೆ ಮುಟ್ಟಿಸಿ ಹರಸಿ ಕೊಡಿ ಎಂದು ಕೇಳಿದನು. ಇದರಿಂದ ನನಗೆ ಭಯವಾಗಿ ನಾನು ಮಾಡುವುದಿಲ್ಲ ಎಂದು ಹೇಳಿದರೂ ಆತ ಮತ್ತೆ ಮತ್ತೆ ಅದೇ ರೀತಿ ಹೇಳಿ, ಆತನು ತಂದಿದ್ದ ಹೂವು, ಹಣ್ಣು ಮತ್ತು ತೆಂಗಿನಕಾಯಿಯನ್ನು ನನ್ನ ಕೈಯಲಿ ಇಟ್ಟನು.

ಇದಾದ ತಕ್ಷಣ ನನಗೆ ಒಂದರಿಂದ ಎರಡು ನಿಮಿಷ ಏನಾಯಿತು ಎಂತ ತಿಳಿಯಲಿಲ್ಲ. ನಂತರ ನೋಡಿದಾಗ ಆ ಇಬ್ಬರೂ ವ್ಯಕ್ತಿಗಳು ಸ್ವಲ್ಪ ದೂರದಲ್ಲಿ ಬೈಕ್​ನಲ್ಲಿ ಹೊರಟು ಹೋಗುತ್ತಿದ್ದರು. ನಂತರ ನನ್ನ ಕತ್ತಿನಲ್ಲಿದ್ದ ಸರವನ್ನು ನೋಡಿಕೊಂಡಾಗ ನನ್ನ ಕತ್ತಿನಲಿ ಇದ್ದ ಸುಮಾರು 110 ಗ್ರಾಂನ ಎರಡು ಎಳೆಯ ಚಿನ್ನದ ಮಾಂಗಲ್ಯ ಸರ ಇರಲಿಲ್ಲ. ಯಾರೋ ಇಬ್ಬರು ವ್ಯಕ್ತಿಗಳು ನಾನು ಒಬ್ಬಳೇ ಇರುವುದನ್ನು ಗಮನಿಸಿ ನನ್ನ ಬಳಿ ಬಂದು ಹಣ, ಕಾಯಿ ಕೊಡುವ ನೆಪಮಾಡಿಕೊಂಡು ನನಗೆ 1 ರಿಂದ 2 ನಿಮಿಷ ಪ್ರಜ್ಞೆ ಇಲ್ಲದಂತೆ ಮಾಡಿ ಮೊಸದಿಂದ ನನ್ನ ಕತ್ತಿನಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿಕೊಂಡು ಹೋಗಿರುತ್ತಾರೆ. ಆದ್ದರಿಂದ ಅವರನ್ನು ಪತ್ತೆ ಮಾಡಿ ನನ್ನ ಮಾಂಗಲ್ಯ ಸರವನ್ನು ಕೊಡಿಸಿಕೊಡಬೇಕೆಂದು ಮನವಿ ಮಾಡುತ್ತೇನೆ ಎಂದು ದೂರಿನಲ್ಲಿ ವಿಜಯಮ್ಮ ಉಲ್ಲೇಖಿಸಿದ್ದಾರೆ.

ಇದೇ ಮಾದರಿಯಲ್ಲಿ ಬ್ಯಾಗಡದೇನಹಳ್ಳಿ ನಿವಾಸಿ ಮುನಿರತ್ನಮ್ಮ ಬಳಿ 45 ಗ್ರಾಂ ಚಿನ್ನವನ್ನು ಎಗರಿಸಿದ್ದಾರೆ. ಕಳ್ಳರ ವಿನೂತನ ಕೈಚಳಕಕ್ಕೆ ಆನೇಕಲ್​ ಮಂದಿ ಬೆಚ್ಚಿ ಬಿದ್ದಿದ್ದಾರೆ. ಮಂಕುಬೂದಿ ಕಳ್ಳರ ಬಂಧಿಸುವಂತೆ ಮಹಿಳೆಯರು ಆಗ್ರಹಿಸಿದ್ದಾರೆ. ನೂರು ರೂಪಾಯಿ ನೋಟಿಗೆ ಮಂಕಾಗುವ ದ್ರಾವಣ ಸಿಂಪಡಿಸಿರುವ ಸಾಧ್ಯತೆ ಇದೆ. ಘಟನೆ ಸಂಬಂಧ ಆನೇಕಲ್ ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net