'ಬೇಬಿ'ಗೆ ಸಂಕಷ್ಟ!; ನಿರ್ಮಾಪಕರಿಗೆ ನೋಟಿಸ್ ಜಾರಿಗೊಳಿಸಿದ ಹೈದರಾಬಾದ್ ಪೊಲೀಸರು

Untitled design - 2023-09-15T073050.748
Published on

ಹೈದರಾಬಾದ್: ಜುಲೈ 14 ರಂದು ಬಿಡುಗಡೆಗೊಂಡ ತೆಲುಗು ಚಲನಚಿತ್ರ 'ಬೇಬಿ' ಸಿನಿಮಾದಲ್ಲಿ ಮಾದಕ ವಸ್ತು ಸೇವನೆಯನ್ನು ಉತ್ತೇಜಿಸುವ ದೃಶ್ಯದ ಕುರಿತು ಹೈದರಾಬಾದ್​ ಪೊಲೀಸರು ಇದೀಗ ಚಿತ್ರದ ನಿರ್ಮಾಪಕರಿಗೆ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಸಿನಿಮಾದಲ್ಲಿ ಡ್ರಗ್ಸ್​ ಸೇವನೆಯನ್ನು ಉತ್ತೇಜಿಸುವ ಸೀನ್​ವೊಂದು ಪ್ರದರ್ಶನವಾಗಿದ್ದು, ಇದನ್ನು ಗಮನಿಸಿದ ಪೊಲೀಸರು ಆ್ಯಂಟಿ ನಾರ್ಕೋಟಿಕ್ಸ್ ಬ್ಯೂರೋ (ANB) ಮುಂದೆ ಹಾಜರಾಗುವಂತೆ ನಿರ್ಮಾಪಕರಿಗೆ ಸಲಹಾ ಸೂಚನೆ ನೀಡಿದೆ. ತಮ್ಮ ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆಯ ಕುರಿತಂತೆ ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಚಿತ್ರ ನಿರ್ಮಾಪಕರಿಗೆ ಇಲಾಖೆ ತಿಳಿಸಿದೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಮಾತನಾಡಿ, "ಸಾರ್ವಜನಿಕರನ್ನು ಪ್ರಭಾವಿಸುವಲ್ಲಿ ಚಲನಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ ಮತ್ತು ಅಂತಹ ವಿಷಯಗಳನ್ನು ಪ್ರಚಾರ ಮಾಡುವ ಯಾವುದನ್ನೂ ತಮ್ಮ ಕೆಲಸದಲ್ಲಿ ಸೇರಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಸಿನಿಮಾದ ನಿರ್ಮಾಪಕರು ಹೊಂದಿರಬೇಕು" ಎಂದು ಹೇಳಿದರು.

"ಚಿತ್ರ ನಿರ್ಮಾಪಕರು 'ಸರಿಯಾದ ವರ್ತನೆ' ಹೊಂದಿರಬೇಕು ಮತ್ತು ಪೊಲೀಸರ ಉದ್ದೇಶ ಅವರಿಗೆ ಕಿರುಕುಳ ನೀಡಬಾರದು" ಎಂದು ಉನ್ನತ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ. ನಿರ್ದೇಶಕ ಸಾಯಿ ರಾಜೇಶ್ ನೀಲಂ, ನಿರ್ಮಾಪಕ ಶ್ರೀನಿವಾಸ್ ಕುಮಾರ್ ನಾಯ್ಡು, ನಟಿ ವೈಷ್ಣವಿ ಚೈತನ್ಯ ಮತ್ತು ಕಿರಕ್ ಸೀತಾ ಜತೆಗೆ ನಿರ್ಮಾಣ ಸಂಸ್ಥೆ ಮಾಸ್ ಮೂವಿ ಮೇಕರ್ಸ್‌ಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net