

ಬೆಂಗಳೂರು: 'ಲವ್ ಇನ್ ದಿ ಟೈಮ್ ಆಫ್ ಕಾಲರಾ' ಎಂಬುದನ್ನು ಬಹಳಷ್ಟು ಮಂದಿ ಕೇಳಿರುತ್ತಾರೆ, ಓದಿರುತ್ತಾರೆ. 'ಲವ್ ಇನ್ ದಿ ಟೈಮ್ ಆಫ್ ಕೋವಿಡ್' ಕೂಡ ಹಲವರು ಕಂಡಿದ್ದಾರೆ, ಕೇಳಿದ್ದಾರೆ, ಓದಿದ್ದಾರೆ. ಆದರೆ ಇದನ್ನು 'ಲವ್ ಇನ್ ದಿ ಟೈಮ್ ಆಫ್ ಟೆರರಿಸಂ' ಎನ್ನಬಹುದೇನೋ!?
ಹೌದು.. ಇಂಥ ವಿಶೇಷ ಹಾಗೂ ವಿಚಿತ್ರ ಎನ್ನುವಂಥ ಪ್ರೀತಿಯ ಅಭಿವ್ಯಕ್ತಿಯೊಂದು ಕಂಡುಬಂದಿದೆ. ಅದು ಎಲ್ಲಿ ಯಾವಾಗ ಏನು ಎಂಬುದಕ್ಕೆ ಉತ್ತರ ಇಸ್ರೇಲ್ನಲ್ಲಿನ ಹಮಾಸ್ ಉಗ್ರರ ಭೀಕರ ದಾಳಿ. ಈ ಸಂದರ್ಭದಲ್ಲಿ ಪೊದೆಯೊಂದರಲ್ಲಿ ಜೋಡಿಯೊಂದು ಜೊತೆಯಾಗಿ ಮಲಗಿ ತೆಗೆದುಕೊಂಡಿರುವ ಫೋಟೋವೊಂದು ಈಗ ವೈರಲ್ ಆಗಲಾರಂಭಿಸಿದೆ.
ದ್ವೇಷದ ಭೀಕರತೆಯ ನಡುವೆಯೂ ಹೀಗೊಂದು ಪ್ರೀತಿಯ ಅಭಿವ್ಯಕ್ತಿಯ ಪ್ರತೀಕವಾಗಿರುವ ಈ ಫೋಟೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಹಳಷ್ಟು ಮಂದಿ ಈ ಫೋಟೋವನ್ನು ಹಂಚಿಕೊಂಡಿದ್ದು, ಇಸ್ರೇಲ್ನ ಪರಿಸ್ಥಿತಿಯನ್ನು ಕಲ್ಪಿಸಿಕೊಂಡು ಪ್ರಾರ್ಥನೆಗಳನ್ನೂ ಸಲ್ಲಿಸಿದ್ದಾರೆ.
ಮೂರು ದಿನಗಳಿಂದ ಇಸ್ರೇಲನ್ನು ಅಕ್ಷರಶಃ ನರಕ ಎಂಬಂತಾಗಿಸಿರುವ ಹಮಾಸ್ ಉಗ್ರರ ದಾಳಿಯ ಭೀಕರತೆಗೆ ನೂರಾರಲ್ಲ, ಸಾವಿರಾರು ಪ್ರಕರಣಗಳು ಸಾಕ್ಷಿಯಾಗಿವೆ. ಸಾರ್ವಜನಿಕರನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದ ಈ ಉಗ್ರರು ಮನೆಗಳಿಗೆ ನುಗ್ಗಿ ಮಕ್ಕಳು-ವೃದ್ಧರು ಎಂಬುದನ್ನೂ ನೋಡದೆ ಕೊಂದಿದ್ದಾರೆ. ಹಲವರ ದೇಹಗಳನ್ನು ಗುಂಡಿನಿಂದ ಛಿದ್ರಗೊಳಿಸಿದ್ದರೆ, ಇನ್ನು ಕೆಲವರನ್ನು ಮನಸೋಇಚ್ಛೆ ಕೊಚ್ಚಿ ಕೊಂದಿದ್ದಾರೆ. ಮನೆಗಳಿಗೆ ನುಗ್ಗಿ ಅತ್ಯಾಚಾರವನ್ನೂ ಎಸಗಿದ್ದಾರೆ.
ಹಮಾಸ್ ಉಗ್ರರ ಈ ಭೀಕರ ದಾಳಿ, ದ್ವೇಷದ ರೋಷಾವೇಶದ ನಡುವೆಯೂ ಪ್ರಾಣಭಯದಲ್ಲಿ ಜೊತೆಗೇ ಇದ್ದ ಜೋಡಿಯೊಂದು ಪ್ರೀತಿಯನ್ನು ವ್ಯಕ್ತಪಡಿಸಿದ್ದ ಪರಿಗೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಲಾರಂಭಿಸಿದೆ. ಹಮಾಸ್ ಉಗ್ರರು ಇಸ್ರೇಲ್ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವೊಂದರ ಮೇಲೂ ದಾಳಿ ಮಾಡಿದ್ದು, ನೂರಾರು ಜನರನ್ನು ಮನಬಂದಂತೆ ಕೊಂದುಹಾಕಿದ್ದರು.
ಇದೇ ಸಂಗೀತ ಕಾರ್ಯಕ್ರಮದಲ್ಲಿದ್ದ ಅಮಿತ್ ಮತ್ತು ನಿರ್ ಎಂಬ ಜೋಡಿ ಉಗ್ರರಿಂದ ಬಚಾವಾಗುವ ಸಲುವಾಗಿ ಅಲ್ಲೇ ಸಮೀಪದ ಪೊದೆಯೊಂದರಲ್ಲಿ ಅವಿತುಕೊಂಡಿದ್ದರು. ಅಲ್ಲಿ ಅವರಿಬ್ಬರು ಭಯದ ನಡುವೆಯೇ ಪ್ರೀತಿಯಿಂದ ಜೊತೆಗಿದ್ದ ಫೋಟೋ ತೆಗೆದುಕೊಂಡಿದ್ದರು. 'ಒಂದು ವೇಳೆ ನಾವು ಸತ್ತರೆ ಇದು ನಮ್ಮ ಪ್ರೀತಿಯ ನೆನಪಾಗಿ ಇರಲಿ' ಎಂದು ಅವರು ಈ ಫೋಟೋ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಬಹಳಷ್ಟು ಮಂದಿ ಇವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಅವರು ಬದುಕಿರಲಿ' ಎಂದು ಬಯಸಿದ್ದಾರೆ. ಇನ್ನು ಹಲವರು 'ಈ ಜೋಡಿ ಜೀವಂತ ಇರಲಿ' ಎಂದು ಹಾರೈಸಿದ್ದಾರೆ. ಹಲವಾರು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಈ ಪೋಟೋ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಈ ಫೋಟೋ ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಹ್ಯಾಂಡಲ್ನಿಂದಲೂ ರಿಪೋಸ್ಟ್ ಆಗಿದೆ.