ಇವರೇ ನೋಡಿ Bigg Boss ಸೀಸನ್​-11ಕ್ಕೆ ಎಂಟ್ರಿ ಪಡೆದ ನಾಲ್ವರು ಸ್ಫರ್ಧಿಗಳು; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

BB 11 Contestants
Published on

ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್​ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗಾಗಲೇ ಯಶಸ್ವಿ 10 ಆವೃತ್ತಿಯನ್ನು ಮುಗಿಸಿರುವ ಬಿಗ್​ಬಾಸ್ ಶೋ 11ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಬಾರಿ ಸ್ವರ್ಗ-ನರಕ ಎಂಬ ಥೀಮ್​ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹೊಸ ಅಧ್ಯಾಯದ ಮೇಲೆ ಜನರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

 ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಪಡೆದುಕೊಂಡಿದೆ.

ನಿನ್ನೆ (ಸೆಪ್ಟೆಂಬರ್​ 28) ರಾಜಾ ರಾಣಿ ರೀಲೋಡೆಡ್​ ಫಿನಾಲೆಯಲ್ಲಿ ಬಿಗ್​ಬಾಸ್ ಸೀಸನ್​ 11ರ ಕೆಲವು ಸ್ಫರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿದ್ದು, ಕಾರ್ಯಕ್ರಮದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿ ಸ್ವರ್ಗ-ನರಕ ಥೀಮ್​ನಲ್ಲಿ ಕಾರ್ಯಕ್ರಮ ಮೂಡಿ ಬರಲಿದ್ದು, ಯಾರೆಲ್ಲಾ ಮನೆಗೆ ಎಂಟ್ರಿ ಪಡೆದಿದ್ದಾರೆ. ಅವರ ಹಿನ್ನೆಲೆ ಏನೆಂದು ಒಮ್ಮೆ ನೋಡೋಣ ಬನ್ನಿ.

ಬಿಗ್​ಬಾಸ್​ ಸೀಸನ್​-11ರ ಮೊದಲ ಸ್ಫರ್ಧಿಯಾಗಿ ನಟಿ ಗೌತಮಿ ಜಾಧವ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರವಾಹಿ ಸೇರಿದಂತೆ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ನಟಿ ಬಿಗ್​ಬಾಸ್​ ಮನೆಗೆ ಮೊದಲ ಸ್ಫರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸತ್ಯ ಧಾರವಾಹಿಯಲ್ಲಿ ರಗಡ್​ ಆಗಿ ಮಿಂಚಿದ್ದ ನಟಿ ನಿಜಜೀವನದಲ್ಲಿ ಹೇಗಿರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಜನರಿಗೆ ಬಿಗ್​ಬಾಸ್​ ಸಹಕಾರಿಯಾಗಲಿದೆ.

Bigg Boss

ಬಿಗ್​ಬಾಸ್​ ಸೀಸನ್​-11ರ ಎರಡನೇ ಸ್ಫರ್ಧಿಯಾಗಿ ವಕೀಲ ಜಗದೀಶ್​ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹೇಳಿಕೆ ಹಾಗೂ ಸೋಶಿಯಲ್​ ಮೀಡಿಯಾ ಲೈವ್​ ವಿಡಿಯೋಗಳ ಮೂಲಕ ಸಾಕಷ್ಟು ಸದ್ದು ಮಾಡಿರುವ ಜಗದೀಶ್​ ಕೆಲ ದಿನಗಳ ಹಿಂದೆ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್​ರನ್ನು ಹೊರತರೋದಾಗಿ ಹೇಳಿ ಪ್ರತಿಭಟನೆ ನಡೆಸುವ ಮೂಲಕ ಸುದ್ದಿಯಾಗಿದ್ದರು.

ಬಿಗ್​ಬಾಸ್​ ಸೀಸನ್​-11ರ ಮೂರನೇ ಸ್ಫರ್ಧಿಯಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ. ಹಿಂದೂಪರ ಭಾಷಣಗಳ ಮೂಲಕ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ಹೇಳಿ ವಂಚನೆ ಎಸಗಿ ಜೈಲು ಪಾಲಾಗಿದ್ದರು. ಇದೀಗ ಬಿಗ್​ಬಾಸ್​ ಸೀಸನ್​-11ರಲ್ಲಿ ಸ್ಫರ್ಧಿಯಾಗಿ ಭಾಗಿಯಾಗುತ್ತಿದ್ದಾರೆ.

ಬಿಗ್​ಬಾಸ್​ ಸೀಸನ್​-11ರ ನಾಲ್ಕನೇ ಸ್ಫರ್ಧಿಯಾಗಿ ಗೋಲ್ಡ್​ ಸುರೇಶ್​ ಎಂಬುವವರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೈ ಮೇಲೆ ಸದಾ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವ ಉತ್ತರ ಕರ್ನಾಟಕ ಮೂಲದ ಸುರೇಶ್​ ಅವರನ್ನು ಜನ ಗೋಲ್ಡ್​ ಸುರೇಶ್​ ಎಂದು ಕರೆಯುತ್ತಾರೆ. ಇದಲ್ಲದೆ ಇವರು ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net