ಕಾನ್ಪುರ: ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು ಪ್ರವಾಸಿ ತಂಡದ ಮೇಲೆ ಹಿಡಿತ ಸಾಧಿಸುತ್ತಿದ್ದು, ಸರಣಿ ಗೆಲ್ಲುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದೆ. ನಾಯಕ ರೋಹಿತ್ ಶರ್ಮ (rohit sharma) ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಇದಲ್ಲದೆ 2015ರ ನಂತರ ಟಾಸ್ ಗೆದ್ದು ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದ ಮೊದಲ ನಾಯಕ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಬರೆದರು.
2015 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅಂದಿನ ನಾಯಕರಾಗಿದ್ದ ವಿರಾಟ್ ಕೊಹ್ಲಿ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಇದಾದ 09 ವರ್ಷಗಳ ಬಳಿಕ ರೋಹಿತ್ ಶರ್ಮ ಎದುರಾಳಿಗಳನ್ನು ಆಹ್ವಾನಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು 1964ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದ ಮನ್ಸೂರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು.
ಇದನ್ನೂ ಓದಿ: ಗಂಭೀರ್ ಸ್ಥಾನಕ್ಕೆ ದಿಗ್ಗಜ ಆಟಗಾರನನ್ನು ನೇಮಿಸಿದ KKR; Rival IPL Fans Stunned
ಪಂದ್ಯ ನಡೆಯುತ್ತಿರುವ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಸ್ಪಿನ್ ಸ್ನೇಹಿಯಾಗಿದ್ದು, ಭಾರತ ತಂಡ ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ ತಂಡವನ್ನೇ ಇಲ್ಲೂ ಕೂಡ ಮುಂದುವರೆಸಲಾಗಿದ್ದು, ರೋಹಿತ್ ಶರ್ಮ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದರು.
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪ್ರದಾಯ ಮುರಿಯುವ ಮೂಲಕ ಹೊಸ ಪದ್ದತಿಗೆ ನಾಂದಿ ಹಾಡಿರುವ ರೋಹಿತ್ ಶರ್ಮ ಯಶ ಕಾಣುತ್ತಾರಾ ಎಂದು ಕಾದು ನೋಡಬೇಕಿದೆ. ಮೊದಲ ಇನ್ನಿಂಗ್ಸ್ ಬ್ಯಾಟ್ ಮಾಡುತ್ತಿರುವ ಬಾಂಗ್ಲಾದೇಶ ತಂಡವು ಊಟದ ವಿರಾಮದ ನಂತರ 31 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ.