

ಢಾಕಾ: ಮಾಜಿ ಸೈನಿಕ ಕುಟುಂಬಸ್ಥರಿಗೆ ಉದ್ಯೋಗದಲ್ಲಿ ಮೀಸಲಾತಿ (reservation) ವಿರೋಧಿಸಿ ಬಾಂಗ್ಲಾದೇಶದಾದ್ಯಂತ ನಡೆದ ವ್ಯಾಪಕ ಹಿಂಸಾಚಾರದಲ್ಲಿ 650ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸರ್ಕಾರ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರೂ ದೌರ್ಜನ್ಯಗಳು ನಿಲ್ಲದಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ನವರಾತ್ರಿ ಸಮಯದಲ್ಲಿ ಭಾರತದ ಪಶ್ಚಿಮ ಬಂಗಾಳ ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಅದ್ಧೂರಿಯಾಗಿ ದುರ್ಗಾ ಪೂಜೆ ನಡೆಯಲಿದ್ದು, ಇದನ್ನು ಮಾಡಬಾರದು ಮುಸ್ಲಿಂ ಸಂಘಟನೆಯೊಂದು ಹಿಂದೂಗಳಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದೆ.
ಇನ್ಸಾಫ್ ಕೀಮ್ಕರಿ ಛತ್ರ-ಜನತಾ ಹೆಸರಿನ ಮುಸ್ಲಿಂ ಸಂಘಟನೆಯೊಂದು ರಸ್ತೆಗಳನ್ನು ಬ್ಲಾಕ್ ಮಾಡಿ ಎಲ್ಲಿಯೂ ಪೂಜೆ ಮಾಡಬಾರದು. ದುರ್ಗ ದೇವಿಯ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜಿಸುವುದರಿಂದ ನೀರು ಮಲಿನವಾಗುತ್ತದೆ. ಹೀಗಾಗಿ ಯಾರೂ ದುರ್ಗಾ ಪೂಜೆಯನ್ನ ಆಚರಿಸಬಾರದು ಎಂದು ರಾಜಧಾನಿ ಢಾಕಾದಾದ್ಯಂತ ಪೋಸ್ಟರ್ಗಳನ್ನು ಅಂಟಿಸಿದೆ.
ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಶೇ.2ಕ್ಕಿಂತ ಕಡಿಮೆ ಇರುವ ಕಾರಣ ದುರ್ಗಾ ಪೂಜೆಯಂದು ಸಾರ್ವಜನಿಕ ರಜೆ ನೀಡಬಾರದು. ಇದರಿಂದ ಬಹು ಸಂಖ್ಯಾತರಾಗಿರುವ ಮುಸ್ಲಿಮರ ಜೀವನಕ್ಕೆ ಅಡ್ಡಿಯಾಗುತ್ತದೆ. ಧಾರ್ಮಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹಿಂದೂ ಹಬ್ಬಗಳಲ್ಲಿ ಯಾವುದೇ ಮುಸಲ್ಮಾನರು ಭಾಗಿಯಾಗಬಾರದು ಎಂದು ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೇ ಭಾರತವು ಬಾಂಗ್ಲಾದೇಶದ ರಾಷ್ಟ್ರೀಯ ಶತ್ರುವಾಗಿರುವುದರಿಂದ ಬಾಂಗ್ಲಾದೇಶದ ಹಿಂದೂ ನಾಗರಿಕರೂ ಭಾರತ ವಿರೋಧಿಯಾಗಲು ಒಪ್ಪಿಕೊಳ್ಳಬೇಕು. ಹೀಗಾಗಿ ಭಾರತ ವಿರೋಧಿ ಬ್ಯಾನರ್ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ದೇವಸ್ಥಾನಗಳಲ್ಲಿ ಅಳವಡಿಸಬೇಕು ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ 16 ಬೇಡಿಕೆಗಳನ್ನು ಸಂಘಟನೆ ಸರ್ಕಾರದ ಮುಂದಿಟ್ಟಿದೆ.