

ಮುಂಬೈ: ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಸೆಣೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಈಗಿಲ್ಲ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖ್ಯಸ್ಥೆ ಹಾಗೂ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ ನಂತರ ಅವರು ಸುದ್ದಿಗಾರರಿಗೆ ಈ ಮಾತು ಹೇಳಿದ್ದಾರೆ.
"ಪ್ರಚಲಿತ ಕಟ್ಟಾವಾದ ಮತ್ತು ಸರ್ವಾಧಿಕಾರದ ವಿರುದ್ಧ ಯಾರೂ ಹೋರಾಡುತ್ತಿಲ್ಲವಾದ್ದರಿಂದ ಒಂದು ದೃಢವಾದ ಪರ್ಯಾಯ ಮಾರ್ಗವನ್ನು ರಚಿಸಬೇಕು. ಶರದ್ಜಿ ಹಿರಿಯ ನಾಯಕ ಮತ್ತು ನಾನು ನಮ್ಮ ರಾಜಕೀಯ ಪಕ್ಷಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಶರದ್ಜೀ ಹೇಳಿದ್ದನ್ನೆಲ್ಲ ನಾನು ಒಪ್ಪುತ್ತೇನೆ. ಈಗ ಯುಪಿಎ ಇಲ್ಲ" ಎಂದು ಬ್ಯಾನರ್ಜಿ ಹೇಳಿದರು.
ಶರದ್ ಪವಾರ್ ಮಾತನಾಡಿ, ಎಲ್ಲಾ ಸಮಾನ ಮನಸ್ಕರು ಒಟ್ಟಾಗಿ ರಾಷ್ಟ್ರ ಮಟ್ಟದಲ್ಲಿ ಪರ್ಯಾಯ ನಾಯಕತ್ವ ರಚಿಸಬೇಕು ಎಂಬುದು ಮಮತಾರ ಅಭಿಪ್ರಾಯ. ಈ ನಿಟ್ಟಿನಲ್ಲಿ ಫಲಪ್ರದವಾದ ಚರ್ಚೆ ನಡೆಸಿದ್ದೇವೆ. ನಮ್ಮ ಚಿಂತನೆ ಚುನಾವಣೆಯ ಬಗೆಗಿದೆ ಎಂದರು. ಕಾಂಗ್ರೆಸ್ ಇರಲಿ, ಯಾರೇ ಇರಲಿ, ಬಿಜೆಪಿ ವಿರುದ್ಧ ಒಟ್ಟಾಗಿ ಬಂದಲ್ಲಿ ಅವರಿಗೆ ಸ್ವಾಗತವಿದೆ ಎಂದರು.
ಮಹಾರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿರುವ ಬ್ಯಾನರ್ಜಿ, ಶಿವಸೇನಾ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರೌತ್ ಅವರನ್ನೂ ಭೇಟಿಯಾಗಿ ಚರ್ಚೆ ನಡೆಸಿದರು. ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳೂ ಒಂದಾಗಬೇಕು ಎಂದು ಬ್ಯಾನರ್ಜಿ ಹೇಳುತ್ತಾ ಬಂದಿದ್ದಾರೆ. ಆದರೆ, ಇತ್ತೀಚಿನ ಅವರ ದೆಹಲಿ ಭೇಟಿಯ ನಂತರ ಅವರು ಕಾಂಗ್ರೆಸ್ಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುವ ಬಗ್ಗೆ ತಳೆದ ಹಾಗಿದೆ. (ಏಜೆನ್ಸೀಸ್)