

ನವದೆಹಲಿ: ಸದಾ ಒಂದಿಲ್ಲೊಂದು ಸಾಮಾಜಿಕ ಕಳಕಳಿಯುಳ್ಳ ಮಹತ್ತರ ಕೆಲಸಗಳಲ್ಲಿ ತೊಡಗಿಕೊಂಡಿರುವ ರಿಲಯನ್ಸ್ ಫೌಂಡೇಶನ್ನ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರ ಹೆಸರು ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಫಾರ್ಚೂನ್ ಇಂಡಿಯಾದ '50 ಮೋಸ್ಟ್ ಪವರ್ಫುಲ್ ವುಮೆನ್ 2021' ಪಟ್ಟಿಯಲ್ಲಿ ನೀತಾ ಅಂಬಾನಿ ಅವರ ಹೆಸರು ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಕೋವಿಡ್ನಿಂದ ದೇಶದಲ್ಲಿ ಸಂಭವಿಸಿದ ಆರೋಗ್ಯ ತುರ್ತುಪರಿಸ್ಥಿತಿಯ ವೇಳೆ ರಿಲಯನ್ಸ್ ಪ್ರತಿಷ್ಠಾನದ ಮೂಲಕ ಬಡವರ ಹಸಿವು ನೀಗಿಸಿದ್ದು ಮಾತ್ರವಲ್ಲ, ಅಸಂಖ್ಯಾತ ಜನರಿಗೆ ಸೂಕ್ತ ಕಾಲಕ್ಕೆ ಉಚಿತವಾಗಿ ಚಿಕಿತ್ಸಾ ಸೌಲಭ್ಯ ಕಲ್ಪಿಸಿದ ಅವರನ್ನು 'ರಿಲಯನ್ಸ್ನ ಗುಡ್ವಿಲ್ ಅಂಬಾಸಿಡರ್' ಎಂದು ವರ್ಣಿಸಲಾಗಿದೆ.
ಏಪ್ರಿಲ್ 2020ರಲ್ಲಿ ಭಾರತ ಕರೊನಾ ಮಹಾಮಾರಿಯ ಹೊಡೆತಕ್ಕೆ ಸಿಕ್ಕಾಗ, ಬಡಜನರಿಗೆ ಮುಂಬೈನಲ್ಲಿ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಹಾಸ್ಪಿಟಲ್ನ ಮೂಲಕ ಬೃಹನ್ಮುಂಬೈ ನಗರ ಪಾಲಿಕೆ ಸಹಯೋಗದಲ್ಲಿ ಕೋವಿಡ್ 19 ಚಿಕಿತ್ಸೆಗೇ ಮೀಸಲಾದ ಮೊದಲ 250-ಬೆಡ್ ಆಸ್ಪತ್ರೆಯನ್ನು ಆರಂಭಿಸಿದರು. ಕ್ರಮೇಣ ಇಲ್ಲಿ ಅಬಾಧಿತ ಆಕ್ಸಿಜನ್ ಪೂರೈಕೆಯುಳ್ಳ 2000 ಬೆಡ್ಗಳ ವ್ಯವಸ್ಥೆ ಮಾಡಿದರು. ಇನ್ನು, ನಿತ್ಯ 15,000 ಪರೀಕ್ಷೆಗಳ ಸಾಮರ್ಥ್ಯ ಹೊಂದಿದ ಕರೊನಾ ಪರೀಕ್ಷಾ ಕೇಂದ್ರದ ಸ್ಥಾಪನೆ, ಜಾಮ್ನಗರದಲ್ಲಿ ದೇಶದ ಅತಿದೊಡ್ಡ ಮೆಡಿಕಲ್ ಗ್ರೇಡ್ ಲಿಕ್ವಿಡ್ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಮತ್ತು ಪ್ರತಿದಿನ 1 ಲಕ್ಷ ಪಿಪಿಇ ಮತ್ತು ಎನ್95 ಮಾಸ್ಕ್ಗಳ ಉತ್ಪಾದನಾ ಘಟಕ ಮುಂತಾದ ಕಾರ್ಯಗಳ ಮೂಲಕ ಅನಿಶ್ಚಿತತೆಯ ಸಮಯದಲ್ಲಿ ದೃಢ ನಿರ್ಧಾರಗಳ ಮೂಲಕ ದೇಶಕ್ಕೆ ಬೆಂಬಲವಾಗಿ ನಿಂತರು. ಇದೇ ವರ್ಷ 20 ಪ್ರಾಣಿಗಳ ಆಂಬುಲೆನ್ಸ್ಗಳಿಗೂ ಚಾಲನೆ ನೀಡಿ ದನಕರುಗಳಿಗೆ ಮೇವು ಮತ್ತು ಚಿಕಿತ್ಸೆಯ ಅಗತ್ಯವಿದ್ದ ಪ್ರಾಣಿಗಳಿಗೆ ಆರೈಕೆ ಒದಗಿಸಿದರು.
ರಿಲಯನ್ಸ್ ಫೌಂಡೇಶನ್ನಿಂದ ಈವರೆಗೆ 25 ಲಕ್ಷ ಜನರಿಗೆ ಕರೊನಾ ಲಸಿಕೆ ನೀಡಲಾಗಿದ್ದು, ದೇಶದ 100 ಜಿಲ್ಲೆಗಳ ಮುಂಚೂಣಿ ಕಾರ್ಯಕರ್ತರು ಮತ್ತು ದಿನಗೂಲಿ ನೌಕರರಿಗೆ 8.5 ಕೋಟಿಗೂ ಹೆಚ್ಚು ಫ್ರೀ ಮೀಲ್ಗಳನ್ನು ಒದಗಿಸಲಾಗಿದೆ. ಮಹಿಳೆಯರಿಗೇ ಮೀಸಲಾದ ಹರ್ಸರ್ಕಲ್ ಆ್ಯಪ್ನ ಆರಂಭ ಸೇರಿದಂತೆ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ತ್ರೀಸಮೂಹಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿರುವ ನೀತಾ ಅಂಬಾನಿ ಅವರ ಸಾಧನೆಗೆ ಸೂಕ್ತ ಮನ್ನಣೆ ಸಿಕ್ಕಿದೆ.