

ನವದೆಹಲಿ: ತಮ್ಮ ಇಂಗ್ಲಿಷ್ ಜ್ಞಾನಕ್ಕೆ ಹೆಸರಾದ ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಇಂದು ಟ್ವಿಟರ್ನಲ್ಲಿ ಬಳಸಿದ ಶಬ್ದಗಳಿಂದಾಗಿ ನೆಟ್ಟಿಗರಿಂದ ಟ್ರೋಲ್ ಆಗುತ್ತಿದ್ದಾರೆ. ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನವಾದ ಇಂದು ಅವರು ಸಂಸದೆಯರೊಂದಿಗೆ ತೆಗೆಸಿಕೊಂಡಿರುವ ಸೆಲ್ಫಿಯ ಶೀರ್ಷಿಕೆ ಮಹಿಳೆಯರಿಗೆ ಅಗೌರವ ಸೂಚಿಸುವಂಥದ್ದು ಎಂದು ಜನ ಸಿಟ್ಟಾಗಿದ್ದಾರೆ.
ಲೋಕಸಭೆಯ ಇತರ ಸದಸ್ಯರೊಂದಿಗೆ ಸೆಲ್ಫಿ ತೆಗೆಸಿಕೊಂಡಿರುವುದೇನೋ ಸರಿ. ಆದರೆ, ಅವರೊಂದಿಗೆ ಕೇವಲ ಮಹಿಳಾ ಸದಸ್ಯರೇ ಇರುವ ಆ ಚಿತ್ರಕ್ಕೆ "ನನ್ನ ಆರು ಜನ ಸಹಸಂಸದರೊಂದಿಗೆ ಇಂದು ಬೆಳಿಗ್ಗೆ" ಎಂದು ಬರೆದು, "ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ" ಎಂಬ ಪ್ರಶ್ನೆಯನ್ನು ತರೂರ್ ಟ್ವೀಟಿಸಿದ್ದಾರೆ.
ಶಶಿ ತರೂರ್ರೊಂದಿಗೆ ಸೆಲ್ಫಿ ತೆಗೆಸಿಕೊಂಡಿರುವ ಸಂಸದೆಯರೆಂದರೆ ಬಾರಾಮತಿಯ ಸುಪ್ರಿಯ ಸುಳೆ, ಪಟಿಯಾಲಾದ ಪ್ರೆಣೀತ್ ಕೌರ್, ದಕ್ಷಿಣ ಚೆನ್ನೈನ ತಮಿಜಾಚಿ ತಂಗಪಾಡಿಯನ್, ಜಾಧವ್ಪುರದ ಮೀಮಿ ಚಕ್ರಬೋರ್ತಿ, ಬಸೀರ್ಹತ್ನ ನುಶ್ರತ್ ಜಹಾನ್ ಮತ್ತು ಕರೂರಿನ ಎಸ್.ಜೋತಿಮಣಿ.
ತರೂರ್ರ ಈ ವೈರಲ್ ಟ್ವೀಟ್ ಬಗ್ಗೆ ನೆಟ್ಟಿಗರ ವೈವಿಧ್ಯಮಯ ಕಾಮೆಂಟುಗಳು ಹರಿದಾಡಿವೆ. "ಆಕರ್ಷಕ? ಛೇ! ಬೇರೆ ಯಾವುದೇ ಕ್ಷೇತ್ರದಲ್ಲಿ ನಿಮ್ಮ ಮಹಿಳಾ ಸಹೋದ್ಯೋಗಿಗಳಿಗೆ ಈ ಶಬ್ದ ಬಳಸಿದ್ದರೆ ನಿಮ್ಮನ್ನು ವಜಾಗೊಳಿಸುತ್ತಿದ್ದರು" ಎಂದೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, "ಮಹಿಳೆಯರನ್ನು ಈ ರೀತಿಯಾಗಿ ವರ್ಣಿಸುವುದು ಎಷ್ಟು ಸರಿ?" ಎಂದು ಕೇಳಿದ್ದರೆ, ಇನ್ನೊಬ್ಬರು "ಇದು ನಿಜಕ್ಕೂ ಅಸಮಂಜಸ" ಎಂದಿದ್ದಾರೆ. (ಏಜೆನ್ಸೀಸ್)