ದೇಶಕ್ಕೆಲ್ಲಾ ಒಂದೇ ನೀತಿ! ಕೇಂದ್ರದ ಪ್ರಯಾಣ ನಿರ್ಬಂಧಗಳನ್ನು ತಕ್ಷಣ ಜಾರಿಗೊಳಿಸಲು ಮಹಾ ಸರ್ಕಾರಕ್ಕೆ ಸೂಚನೆ

coronaairport
Published on

ನವದೆಹಲಿ: ಕರೊನಾ ಎರಡನೇ ಅಲೆಗೆ ಬೃಹತ್ ಕೊಡುಗೆ ನೀಡಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ತಕ್ಷಣದಿಂದಲೇ ಕೇಂದ್ರ ಸರ್ಕಾರ ಹೇಳಿರುವ ಪ್ರಯಾಣ ನಿರ್ಬಂಧಗಳನ್ನು ಜಾರಿಗೆ ತರುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​ ಸೂಚಿಸಿದ್ದಾರೆ. ಒಮಿಕ್ರಾನ್​ ರೂಪಾಂತರಿಯ ತಡೆಗಾಗಿ ಕೇಂದ್ರ ಸರ್ಕಾರದ ನಿಯಮಗಳ ರೀತಿಯೇ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​ ಪರೀಕ್ಷೆ ಮತ್ತು ನೆಗೆಟೀವ್ ಬಂದರೂ ಮನೆಯಲ್ಲೇ 14 ದಿನ ಕ್ವಾರಂಟೈನ್ ಎರಡನ್ನೂ ಕಡ್ಡಾಯಗೊಳಿಸಬೇಕು ಎಂದಿದ್ದಾರೆ.

ಕೇಂದ್ರ ಸರ್ಕಾರ ವಿಧಿಸಿದ ನಿಯಮಗಳಿಗೆ ಭಿನ್ನವಾಗಿ, ಮಹಾರಾಷ್ಟ್ರ ಸರ್ಕಾರ, ಒಮಿಕ್ರಾನ್​ ಪತ್ತೆಯಾಗಿರುವ ದೇಶಗಳಿಂದ ಬಂದಿಳಿಯುವ ಪ್ರಯಾಣಿಕರಿಗೆ ಹೊಸ ಪರೀಕ್ಷೆ ಮತ್ತು ಕ್ವಾರಂಟೈನ್​ ನಿಯಮಗಳನ್ನು ತಕ್ಷಣದಿಂದ ಅನ್ವಯಿಸುವುದಿಲ್ಲ ಎಂದಿತ್ತು. ಎರಡು ದಿನಗಳ ಅಂದರೆ ಡಿಸೆಂಬರ್​ 2ರ ಮಧ್ಯರಾತ್ರಿವರೆಗೆ ಕಾಲಾವಕಾಶ ನೀಡಲಾಗುವುದು ಎಂದು ಹೇಳಿತ್ತು. ಜೊತೆಗೆ, ದೇಶೀಯ ಪ್ರಯಾಣಿಕರಿಗೆ ಕೇಂದ್ರದ 48 ಗಂಟೆಗಳೊಳಗಿನ ಕರೊನಾ ನೆಗೆಟಿವ್​ ವರದಿಯ ಬದಲಿಗೆ 72 ಗಂಟೆಗಳೊಳಗಿನ ನೆಗೆಟಿವ್​ ವರದಿ ಕಡ್ಡಾಯಗೊಳಿಸಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಮಿಕ್ರಾನ್​ ಹರಡುವಿಕೆ ತಡೆಯಲು ವಿಧಿಸಿರುವ ನಾಲ್ಕು ನಿಯಮಗಳನ್ನು, ದೇಶದ ಎಲ್ಲೆಡೆ ಏಕರೂಪತೆಯನ್ನು ಕಾಪಾಡಲು, ಕೂಡಲೇ ಜಾರಿಗೊಳಿಸಿ ಆದೇಶ ಹೊರಡಿಸಬೇಕೆಂದು ಕಾರ್ಯದರ್ಶಿ ಭೂಷಣ್​​ ಮಹಾ ಸರ್ಕಾರಕ್ಕೆ ಇಂದು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net