15 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕರೊನಾ;  ಕಂಟೇನ್ಮೆಂಟ್ ವಲಯಗಳಾಗಿ ಸಿದ್ಧಗಂಗಾ, ವರದರಾಜು ನರ್ಸಿಂಗ್ ಕಾಲೇಜು

30Tmk_Corona_Nursing
Published on

ತುಮಕೂರು : ಒಮಿಕ್ರಾನ್ ಆತಂಕದ ನಡುವೆಯೇ ನಗರದಲ್ಲಿ ಕೇರಳ ಮೂಲದ 15 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ದೃಢಪಟ್ಟಿರುವುದು ಜಿಲ್ಲಾಡಳಿತಕ್ಕೆ ಹೊಸ ಸವಾಲು ಎದುರಾದಂತಾಗಿದೆ. ಸೋಂಕಿತರ ಗಂಟಲು ದ್ರವವನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.

ಸರ್ಕಾರದ ನಿರ್ದೇಶನದಂತೆ ನಗರದ ಅಶ್ವಿನಿ, ಅರುಣ, ಶ್ರೀದೇವಿ, ಅಕ್ಷಯ, ಶ್ರೀ ಕೃಷ್ಣ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ವರದರಾಜು ನರ್ಸಿಂಗ್ ಕಾಲೇಜಿನ 90 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಹಾಗೂ ಶ್ರೀ ಸಿದ್ಧಗಂಗಾ ನರ್ಸಿಂಗ್ ಕಾಲೇಜಿನ 150 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 8 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಕರೊನಾ ಕಾಣಿಸಿಕೊಂಡಿರುವ 15 ವಿದ್ಯಾರ್ಥಿನಿಯರೂ ಕೇರಳ ಮೂಲದವರಾಗಿದ್ದಾರೆ.

ಕಂಟೇನ್ಮೆಂಟ್ ವಲಯ: ಸೋಂಕು ದೃಢಪಟ್ಟ ಕಾಲೇಜನ್ನು ಕಂಟೇನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಅಲ್ಲದೆ, ಸೋಂಕಿತರು ಅವರ ಜತೆ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಅವರ ಮೇಲೆ ಕಣ್ಗಾವಲು ಇಡಲಾಗಿದೆ. ಸೋಂಕಿತರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಡಿಸಿ, ಡಿಎಚ್‌ಒ ಭೇಟಿ: ವಿದ್ಯಾರ್ಥಿನಿಯರಲ್ಲಿ ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಂಗಳವಾರ ಶ್ರೀ ಸಿದ್ಧಗಂಗಾ ನರ್ಸಿಂಗ್ ಕಾಲೇಜು ವಸತಿನಿಲಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಡಿಎಚ್‌ಒ ಡಾ.ನಾಗೇಂದ್ರಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಹಾಜರಿದ್ದರು.

ಸೋಂಕಿತರಿಗೆ ಪ್ರತ್ಯೇಕ ಪರೀಕ್ಷೆ ! :ನರ್ಸಿಂಗ್ ಪರೀಕ್ಷೆ ನಡೆಯುತ್ತಿರುವುದರಿಂದ ಕರೊನಾ ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿರುವ ಕಾಲೇಜು ಹಾಗೂ ಹಾಸ್ಟೆಲ್‌ಗಳಿಗೆ ವೈದ್ಯಾಧಿಕಾರಿಗಳು ನಿರಂತರ ಭೇಟಿ ನೀಡಿ ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳ ಮೇಲೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನಿರ್ದೇಶನ ನೀಡಿದರು.

ಸೋಂಕು ದೃಢಪಟ್ಟ ಕಾಲೇಜಿನ ಸುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಿರುವುದರಿಂದ 14 ದಿನಗಳ ಕಾಲ ಕಣ್ಗಾವಲು ಇಡಲಾಗಿದೆ. ಡಾ.ಮೋಹನ್‌ದಾಸ್, ಸರ್ವೇಕ್ಷಣ ಅಧಿಕಾರಿ  ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿದ್ದು ಹೊರ ರಾಜ್ಯಗಳಿಂದ ಬರುವವರಿಗೆ ಕರೊನಾ ಪರೀಕ್ಷೆ ಅಗತ್ಯವಿದೆ. ಒಂದು ಡೋಸ್ ಪಡೆದವರಿಗೆ ಕಾಲೇಜಿಗೆ ಪ್ರವೇಶ ಕೊಡಬೇಕು. ಅಲ್ಲದೆ, ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net