

Stock Market: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರತೀಕಾರದ ಸುಂಕ ವಿಧಿಸಿದ್ದು, ಆ ನಂತರ ಚೀನಾ ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಿಗೆ ಸುಂಕ ವಿರಾಮ ಘೋಷಿಸಿದ್ದು ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಕ್ಷಣ ಕ್ಷಣದ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಇಂದು (ಏಪ್ರಿಲ್ 15) ಬೆಳಗ್ಗೆ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಹಿಂದಿನ ಅವಧಿಗೆ ಹೋಲಿಸಿದರೆ ಲಾಭದಲ್ಲಿ ವಹಿವಾಟು ಅರಂಭಿಸಿವೆ. ಬೆಳಗ್ಗೆ 9.23ಕ್ಕೆ ನಿಫ್ಟಿ 472 ಪಾಯಿಂಟ್ಗಳ ಏರಿಕೆಯೊಂದಿಗೆ 23,296 ಅಂಕಗಳಿಗೆ ತಲುಪಿದರೆ, ಸೆನ್ಸೆಕ್ಸ್ 1,564 ಪಾಯಿಂಟ್ಗಳ ಏರಿಕೆಯೊಂದಿಗೆ 76,727 ಅಂಕಗಳಲ್ಲಿ ವಹಿವಾಟು ಆರಂಭಿಸಿದೆ. ಇದು ಹೊಸ ಲೆಕ್ಕಾಚಾರಗಳನ್ನು ನೀಡಿವೆ.
ಮಂಗಳವಾರ ಭಾರತೀಯ ಷೇರು ಮಾರುಕಟ್ಟೆಗಳು ತೀವ್ರವಾಗಿ ಏರಿಕೆ ಕಂಡಿರುವುದು ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,750 ಪಾಯಿಂಟ್ಗಳಿಗಿಂತ ಹೆಚ್ಚು ಏರಿಕೆ ಕಂಡಿವೆ ಮತ್ತು ನಿಫ್ಟಿ 23,350 ದಾಟಿದೆ. ಇದು ಏಪ್ರಿಲ್ 2ರಂದು ಟ್ರಂಪ್ ಸುಂಕ ಘೋಷಣೆಯ ಬಳಿಕ ಉಂಟಾದ ನಷ್ಟಗಳನ್ನು ಅಳಿಸಿಹಾಕಿದೆ ಎಂದು ಬ್ಲೂಮ್ಬರ್ಗ್ ವರದಿ ಉಲ್ಲೇಖಿಸಿದೆ.
ಬಿಎಸ್ಇ ಮಾನದಂಡ ಸೆನ್ಸೆಕ್ಸ್ 1577.63 ಪಾಯಿಂಟ್ಗಳು ಅಥವಾ ಶೇ.2.10ರಷ್ಟು ಏರಿಕೆಯಾಗಿ 76,734.89ಕ್ಕೆ ದಿನದ ಅಂತ್ಯದೊಂದಿಗೆ ಮಾರುಕಟ್ಟೆಯು ಹಸಿರು ಬಣ್ಣದಲ್ಲಿ ಕೊನೆಗೊಂಡಿತು. ನಿಫ್ಟಿ 50 ಕೂಡ 500 ಪಾಯಿಂಟ್ಗಳು ಅಥವಾ ಶೇ.2.19ರಷ್ಟು ಗಳಿಸಿ 23,328.55ಕ್ಕೆ ತಲುಪಿದೆ. ಬಿಎಸ್ಇಯ 30 ಷೇರು ಪ್ಯಾಕ್ನಿಂದ ಇಂಡಸ್ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಎಲ್ ಅಂಡ್ ಟಿ, ಆಕ್ಸಿಸ್ ಬ್ಯಾಂಕ್, ಅದಾನಿ ಪೋರ್ಟ್ಸ್, ಎಚ್ಡಿಎಫ್ಸಿ ಬ್ಯಾಂಕ್ ಲಾಭ ಗಳಿಸಿವೆ. ಆದರೆ, ಎಚ್ಯುಎಲ್ ಮತ್ತು ಐಟಿಸಿ ಮಾತ್ರ ಕೆಳ ಕ್ರಮಾಂಕದಲ್ಲಿ ಉಳಿದಿವೆ.
ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳು ಸೇರಿದಂತೆ ಗ್ರಾಹಕನ ದಿನ ಬಳಕೆಯಲ್ಲಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಸುಂಕ ವಿನಾಯಿತಿ ನೀಡಿದ ಟ್ರಂಪ್, ಇದೀಗ ಜಾಗತಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಿಗೆ ದೊಡ್ಡ ಮಟ್ಟದ ರಿಲೀಫ್ ಕೊಟ್ಟಿದ್ದಾರೆ.
ಬ್ಲೂಮ್ಬರ್ಗ್ ವರದಿಯ ಪ್ರಕಾರ, ಟ್ರಂಪ್ ಪಾರಸ್ಪರಿಕ ಸುಂಕಗಳು ಜಾಗತಿಕ ಅನಿಶ್ಚಿತತೆಯನ್ನು ಹೆಚ್ಚಿಸುತ್ತಿರುವುದರಿಂದ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳನ್ನು ಈಗ ಸಾಪೇಕ್ಷ ಸುರಕ್ಷಿತ ಸ್ವರ್ಗ ಎಂದಿದ್ದಾರೆ. ಬಲವಾದ ದೇಶೀಯ ಆರ್ಥಿಕತೆಯೊಂದಿಗೆ, ಸಂಭಾವ್ಯ ಜಾಗತಿಕ ಹಿಂಜರಿತವನ್ನು ಎದುರಿಸಲು ಭಾರತ, ಇತರೆ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.
ಅಮೆರಿಕ-ಚೀನಾ ವ್ಯಾಪಾರ ಯುದ್ಧವು ತಾರಕಕ್ಕೇರುತ್ತಿದ್ದಂತೆ, ಭಾರತವು ಚೀನಾಕ್ಕೆ ಸಂಭಾವ್ಯ ಉತ್ಪಾದನಾ ಪರ್ಯಾಯವಾಗಿ ಗಮನ ಸೆಳೆಯುತ್ತಿದೆ. ಬೀಜಿಂಗ್ನ ಪ್ರತೀಕಾರದ ನಿಲುವಿಗಿಂತ ಭಿನ್ನವಾಗಿ, ನವದೆಹಲಿ ಸರಳ ವಿಧಾನವನ್ನು ಆರಿಸಿಕೊಂಡಿದೆ. ಟ್ರಂಪ್ ಆಡಳಿತದೊಂದಿಗೆ ತಾತ್ಕಾಲಿಕ ವ್ಯಾಪಾರ ಒಪ್ಪಂದವನ್ನು ಅನುಸರಿಸುತ್ತಿದೆ ಎಂದು ಬ್ಲೂಮ್ಬರ್ಗ್ ವರದಿ ಹೇಳಿದೆ.
ದ್ವಿಗುಣ ಉತ್ತೇಜನದಲ್ಲಿ, ವಿದೇಶಿ ಆಟೋಮೊಬೈಲ್ಗಳು ಮತ್ತು ಅದರ ಭಾಗಗಳ ಮೇಲಿನ ಅಸ್ತಿತ್ವದಲ್ಲಿರುವ ಶೇ.25ರಷ್ಟು ಸುಂಕಗಳಿಂದ ಸಂಭಾವ್ಯ ವಿನಾಯಿತಿಗಳ ಬಗ್ಗೆ ಟ್ರಂಪ್ ಈಗಾಗಲೇ ಸುಳಿವು ನೀಡಿದ್ದಾರೆ. ಟಾಟಾ ಮೋಟಾರ್ಸ್ ಶೇ.5ರಷ್ಟು ಏರಿಕೆ ಕಂಡರೆ, ಸಂವರ್ಧನಾ ಮದರ್ಸನ್ ಮತ್ತು ಸೋನಾ BLW ನಂತಹ ಆಟೋ ಪಾರ್ಟ್ ತಯಾರಕರು ಶೇ.7ಕ್ಕಿಂತ ಹೆಚ್ಚು ಕಂಡಿದ್ದಾರೆ.
"ಟ್ರಂಪ್ ಸುಂಕ ವಿರಾಮವು ಆಟೋ ಪೂರೈಕೆ ಸರಪಳಿಗಳಿಗೆ ಉಸಿರಾಡಲು ಅವಕಾಶ ನೀಡಿದೆ ಮತ್ತು ಅನಿರೀಕ್ಷಿತತೆಯ ಮಂಜಿನ ಮುಸುಕನ್ನು ನಿವಾರಿಸಲಿದೆ" ಎಂದು ಭರತ್ ರಾಜೇಶ್ವರನ್ ಹೇಳಿದ್ದಾರೆ.
ಪ್ರಮುಖ ಬ್ಯಾಂಕುಗಳಾದ ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಇಂಡಸ್ಇಂಡ್ ಬ್ಯಾಂಕ್ ದೊಡ್ಡ ಲಾಭಗಳನ್ನು ದಾಖಲಿಸಿದ್ದು, ಮಾರುಕಟ್ಟೆಯ ವ್ಯಾಪಕ ರ್ಯಾಲಿಗೆ ಉತ್ತಮ ಕೊಡುಗೆ ನೀಡಿವೆ. ಉಳಿತಾಯ ಖಾತೆ ಬಡ್ಡಿದರಗಳನ್ನು ಕಡಿತಗೊಳಿಸುವ ಎಚ್ಡಿಎಫ್ಸಿ ಬ್ಯಾಂಕಿನ ಕ್ರಮವು ನಿವ್ವಳ ಬಡ್ಡಿದರಗಳ ಮೇಲಿನ ಹೂಡಿಕೆದಾರರ ಕಳವಳಗಳನ್ನು ಕಡಿಮೆ ಮಾಡಲು ಸಹಾಯ ಮಾಡಿತು.
ವಿಶ್ವದ ದೊಡ್ಡಣ್ಣ ಅವರ ಸುಂಕ ರದ್ದತಿಯ ಬೆನ್ನಲ್ಲೇ ಅಮೆರಿಕ ಮತ್ತು ಏಷ್ಯಾದ ಮಾರುಕಟ್ಟೆಗಳು ದೃಢವಾಗಿ ಹಸಿರು ಬಣ್ಣಕ್ಕೆ ತಿರುಗಿವೆ. ಇದು ಹೂಡಿಕೆದಾರರಲ್ಲಿ ಕೊಂಚ ನಿರಾಳ ಮತ್ತು ಹೊಸ ವಿಶ್ವಾಸವನ್ನು ತುಂಬಿದೆ. ಶುಕ್ರವಾರ ಮತ್ತು ಸೋಮವಾರದ ನಡುವೆ ಅಮೆರಿಕ ಸೂಚ್ಯಂಕಗಳು ಶೇ.3–4ರಷ್ಟು ಏರಿಕೆ ಕಂಡಿವೆ. "ಜಾಗತಿಕ ಷೇರುಗಳಲ್ಲಿನ ಬದಲಾವಣೆ ಹಾದಿ ಭಾರತದ ಅಪಾಯದ ಸ್ವತ್ತುಗಳಿಗೆ ಬೆಂಬಲ ಹಿನ್ನೆಲೆಯನ್ನು ಸೃಷ್ಟಿಸಿದೆ” ಎಂದು ದಿ ಗ್ಲೋಬಲ್ ಸಿಐಓ ಕಚೇರಿಯ ಗ್ಯಾರಿ ಡುಗನ್ ತಿಳಿಸಿದ್ದಾರೆ,(ಏಜೆನ್ಸೀಸ್).