ಅಪರೂಪದ 'ನೀಲಿ ಗೋಲ್ಕೊಂಡ ವಜ್ರ'ಕ್ಕೆ ಸಖತ್​ ಡಿಮ್ಯಾಂಡ್​! ಶೀಘ್ರವೇ ಹರಾಜಿಗೆ, ಏನಿದರ ಇತಿಹಾಸ? | The Golconda Blue

ವಿಜಯವಾಣಿ (2)
Published on

The Golconda Blue: ಗೋಲ್ಕೊಂಡ ಗಣಿಗಳಲ್ಲಿ ಕಂಡುಬರುವ ಅಪರೂಪದಲ್ಲೇ ಅಪರೂಪದ ಈ ರಾಯಲ್ ನೀಲಿ ಬಣ್ಣದ ವಜ್ರ ಇದೇ ಮೇ 14ರಂದು ಜಿನೀವಾದಲ್ಲಿ ಹರಾಜಿಗೆ ಬರಲಿದೆ. ಈ 3.24 ಕ್ಯಾರೆಟ್ ನೀಲಿ ವಜ್ರದ ಉಂಗುರವನ್ನು ನ್ಯೂಯಾರ್ಕ್‌ನಲ್ಲಿರುವ ಕ್ರಿಸ್ಟೀಸ್ ಜ್ಯುವೆಲ್ಲರಿ ಶಾಪ್ ಹರಾಜಿಗಿಡಲು ಪ್ರಸ್ತಾಪಿಸಿದೆ. ಈ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಕೋಟ್ಯಾಧಿಪತಿಗಳು ಹರಾಜಿನಲ್ಲಿ ಖರೀದಿಸಲು ಭಾರೀ ಕುತೂಹಲ ವ್ಯಕ್ತಪಡಿಸಿದ್ದಾರೆ.

ಕ್ರಿಸ್ಟೀಸ್ ಇಂಟರ್‌ನ್ಯಾಷನಲ್ ಜ್ಯುವೆಲ್ಲರಿ ಮುಖ್ಯಸ್ಥರಾದ ರಾಹುಲ್ ಕಡಕಿಯಾ ಮಾತನಾಡಿ, "ಈ ಉಂಗುರ ಒಮ್ಮೆ ಇಂದೋರ್ ಮಹಾರಾಜರ ಒಡೆತನದಲ್ಲಿತ್ತು. ಆದ್ರೆ, ಇಲ್ಲಿಯವರೆಗೆ ಅಂತಹ ಉಂಗುರವನ್ನು ಹರಾಜಿಗೆ ಇಟ್ಟಿರಲಿಲ್ಲ. ಈಗ ನಾವು ಈ ನೀಲಿ ಗೋಲ್ಕೊಂಡ ವಜ್ರವನ್ನು ಹರಾಜಿನಲ್ಲಿ ಇಡಲು ಮುಂದಾಗಿದ್ದು, ಇದರ ಬೆಲೆ 300ರಿಂದ 430 ಕೋಟಿ ರೂ.ವರೆಗೆ ಮಾರಾಟ ಆಗಬಹುದು" ಎಂದು ಹೇಳಿದ್ದಾರೆ.

259 ವರ್ಷಗಳ ಇತಿಹಾಸ

ಇಂತಹ ಅಪರೂಪದ ಮತ್ತು ಕೋಟಿಗೆ ಬೆಲೆಬಾಳುವ ವಜ್ರಗಳು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹರಾಜಿಗೆ ಬರುತ್ತವೆ. ಇದಕ್ಕೆ 259 ವರ್ಷಗಳ ಇತಿಹಾಸವಿದೆ ಎಂದು ವರದಿ ಹೇಳಿದೆ. ವರ್ಷಗಳಲ್ಲಿ, ಕ್ರಿಸ್ಟೀಸ್ ಸಂಸ್ಥೆ ವಿಶ್ವದ ಕೆಲವು ಪ್ರಸಿದ್ಧ ಮತ್ತು ಪ್ರಮುಖ ವಜ್ರಗಳನ್ನು ಮಾತ್ರ ಮಾರಾಟ ಮಾಡಿದೆ. ಆರ್ಚ್‌ಡ್ಯೂಕ್ ಜೋಸೆಫ್ ಡೈಮಂಡ್, ಪ್ರಿನ್ಸ್ಲಿ ಡೈಮಂಡ್ ಮತ್ತು ವಿಟ್ಟೆಲ್ಸ್‌ಬಾಚ್ ಡೈಮಂಡ್‌ಗಳನ್ನು ಈ ಹಿಂದಿನ ಹರಾಜುಗಳಲ್ಲಿ ಮಾರಾಟ ಮಾಡಿರುವುದಾಗಿ ರಾಹುಲ್​ ಹೇಳಿದ್ದಾರೆ.

ಮಹಾರಾಜ ಯಶವಂತ್ ರಾವ್ ಹೋಳ್ಕರ್ II

'ಗೋಲ್ಕೊಂಡ ನೀಲಿ' ವಜ್ರವು ವಿಶ್ವದ ಅಪರೂಪದ ನೀಲಿ ವಜ್ರಗಳಲ್ಲಿ ಒಂದಾಗಿದೆ ಎಂದು ರಾಹುಲ್​ ತಿಳಿಸಿದ್ದಾರೆ. ಕ್ರಿಸ್ಟೀಸ್ ಸಂಸ್ಥೆ ಪ್ರಕಾರ, ಈ ವಜ್ರವು ಒಮ್ಮೆ ಭಾರತದ ಇಂದೋರ್‌ನ ಮಹಾರಾಜ ಯಶವಂತ್ ರಾವ್ ಹೋಳ್ಕರ್ IIಗೆ ಸೇರಿತ್ತು. 1923ರಲ್ಲಿ, ಮಹಾರಾಜರ ತಂದೆ ಪ್ರಸಿದ್ಧ ಫ್ರೆಂಚ್ ಐಷಾರಾಮಿ ಆಭರಣ ಬ್ರ್ಯಾಂಡ್ ಚೌಮೆಟ್ ವಜ್ರದಿಂದ ಕಂಕಣ ತಯಾರಿಸಲು ಪ್ರಸ್ತಾಪಿಸಿದ್ದರು. ಅವರು ಹಿಂದೆ ಅದೇ ಆಭರಣ ಕಂಪನಿಯಿಂದ 'ಇಂದೋರ್ ಪಿಯರ್ಸ್' ಎಂಬ ಎರಡು ಗೋಲ್ಕೊಂಡ ವಜ್ರಗಳನ್ನು ಖರೀದಿಸಿದ್ದರು ಎಂದು ಹೇಳಿದೆ.

ನ್ಯೂಯಾರ್ಕ್‌ನ ಪ್ರಸಿದ್ಧ ಆಭರಣ ವ್ಯಾಪಾರಿ ಹ್ಯಾರಿ ವಿನ್‌ಸ್ಟನ್, 1947 ರಲ್ಲಿ ಈ ಅಪರೂಪದ ನೀಲಿ ವಜ್ರವನ್ನು ಖರೀದಿಸಿದ್ದರು. ಅವರು ಈ ನೀಲಿ ವಜ್ರ ಮತ್ತು ಅದೇ ಗಾತ್ರದ ಮತ್ತೊಂದು ಬಿಳಿ ವಜ್ರವನ್ನು ಬಳಸಿ ಬ್ರೂಚ್ ತಯಾರಿಸಿದರು. ಈ ಬ್ರೂಚ್ ಬರೋಡಾದಲ್ಲಿನ ಮಹಾರಾಜರನ್ನು ತಲುಪಿತು. ಕೆಲವು ವರ್ಷಗಳ ಬಳಿಕ ರಾಜಮನೆತನವು ಆ ಬ್ರೂಚ್ ಅನ್ನು ಓರ್ವ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿತು. ಈಗ ಅದೇ ವಜ್ರ ಜಿನೀವಾದ ಫೋರ್ ಸೀಸನ್ಸ್ ಹೋಟೆಲ್ ಡೆಸ್ ಬರ್ಗೆಸ್‌ನಲ್ಲಿ ಹರಾಜಿಗೆ ಲಗ್ಗೆಯಿಡಲಿದೆ ಎಂದು ವರದಿ ಉಲ್ಲೇಖಿಸಿದೆ. ಅಸಲಿಗೆ ಇದು ಯಾವ ಕೋಟ್ಯಾಧೀಶ್ವರನ ಕೈಗೆ ಸೇರಲಿದೆ ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net