ಜಾತಿ ಗಣತಿ ವಿಚಾರವಾಗಿ ನಾಳೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರ ಜತೆ ಚರ್ಚೆ: ಡಿ.ಕೆ. ಶಿವಕುಮಾರ್

ವಿಜಯವಾಣಿ (1)
Published on

ಬೆಂಗಳೂರು: “ಜಾತಿ ಗಣತಿ ವಿಚಾರವಾಗಿ ನಾಳೆ (ಮಂಗಳವಾರ) ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರ ಜತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇಂದು ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ನಾನು ಜಾತಿ ಗಣತಿ ವರದಿಯನ್ನು ಸಂಪೂರ್ಣವಾಗಿ ನೋಡಿಲ್ಲ, ಅದರ ಅಧ್ಯಯನ ಮಾಡಲಾಗುತ್ತಿದೆ. ನಾಳೆ ಕಾಂಗ್ರೆಸ್ ಪಕ್ಷದ ನಮ್ಮ ಸಮುದಾಯದ ಶಾಸಕರ ಸಭೆ ಕರೆದಿದ್ದೇನೆ. ಅವರ ಜತೆ ಚರ್ಚೆ ಮಾಡಿ, ಯಾರ ಮನಸ್ಸಿಗೂ ನೋಯಿಸದೇ ಎಲ್ಲರ ಗೌರವ ಕಾಪಾಡಲು ಸಲಹೆ ನೀಡುತ್ತೇವೆ” ಎಂದರು.

ನಾಳೆ ಸಂಜೆ ಸಭೆ

ಬೆಂಗಳೂರಿನ ಕುಮಾರ ಪಾರ್ಕ್ ಗಾಂಧಿ ಭವನ ರಸ್ತೆಯಲ್ಲಿರುವ ಡಿಸಿಎಂ ಅವರ ಸರ್ಕಾರಿ ನಿವಾಸದಲ್ಲಿ ದಿನಾಂಕ 15-04-2025 ರಂದು ಮಂಗಳವಾರ ಸಂಜೆ 6.00 ಗಂಟೆಗೆ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರ ಸಭೆ ಕರೆಯಲಾಗಿದೆ.

ಎಲ್ಲರಿಗೂ ನ್ಯಾಯ ಒದಗಿಸುವ ಪಕ್ಷ ಕಾಂಗ್ರೆಸ್

ಧರ್ಮದ ಆಧಾರದಲ್ಲಿ ಟೆಂಡರ್ ನೀಡಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಕ್ಕುಗಳನ್ನು ಕಾಂಗ್ರೆಸ್ ಸರ್ಕಾರ ಕಸಿಯುತ್ತಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, "ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೂ ಮೀಸಲಾತಿ ನೀಡಲಾಗಿದೆ. ಸಮಾಜದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಆದ್ಯತೆ. ಕಾಂಗ್ರೆಸ್ ಪಕ್ಷ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ಪಕ್ಷ" ಎಂದರು.

ಒಬಿಸಿಗಳ ಮೀಸಲಾತಿಯನ್ನು ಕಾಂಗ್ರೆಸ್ ಕಿತ್ತುಕೊಂಡಿದೆ ಎನ್ನುವ ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, "ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ. ಬೆಂಗಳೂರಿನ ಸಂಸದರೊಬ್ಬರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಎದೆ ಸೀಳಿದರೆ ಅಕ್ಷರವಿಲ್ಲ, ಪಂಕ್ಚರ್ ಹಾಕಲು ಮಾತ್ರ ಸೀಮಿತ ಎಂದು ದ್ವೇಷ ಕಾರಿದ್ದರು. ಆದರೆ ನಾವು ಆ ಸಮುದಾಯ ಇತರೇ ಕೆಲಸಗಳನ್ನು ಮಾಡಲು ಸಾಮರ್ಥ್ಯ ಹೊಂದಿದೆ ಎಂದು ತೋರಿಸಬೇಕಾಗಿದೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net