

ಹೈದರಾಬಾದ್: ಕೇಂದ್ರದ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಪಾಲುದಾರರಾಗಿರುವ ಟಿಡಿಪಿ ಮುಖ್ಯಸ್ಥ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪೂರ್ಣ ಸಹಕಾರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಈ ಕಪ್ಪು ವಕ್ಫ್ ಕಾನೂನನ್ನು ತರಲು ಸಾಧ್ಯವಾಯಿತು ಎಂದು ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಆರೋಪಿಸಿದ್ದಾರೆ.
ಭಾನುವಾರ (ಏ.13) ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ದಾರುಸ್ಸಲಾಂನಲ್ಲಿ ಮಾತನಾಡಿದ ಓವೈಸಿ, "ಟಿಟಿಡಿ ಮಂಡಳಿಯಲ್ಲಿ ಹಿಂದೂಗಳನ್ನು ಮಾತ್ರ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿರುವ ಆಂಧ್ರ ಸಿಎಂ ಚಂದ್ರಬಾಬು, ಅದೇಗೆ ವಕ್ಫ್ ಮಂಡಳಿಯಲ್ಲಿ ಇತರ ಧರ್ಮಗಳ ಸದಸ್ಯರನ್ನು ಸೇರಿಸುವ ಮಸೂದೆಯನ್ನು ಬೆಂಬಲಿಸಿದರು. ಚಂದ್ರಬಾಬು ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ್ದಾರೆ. ಹೀಗೆ ಮಾಡುವ ಮೂಲಕ ಸ್ವತಃ ಅವರ ಮಗ ಲೋಕೇಶ್ ಅವರ ರಾಜಕೀಯ ಭವಿಷ್ಯವನ್ನು ಛಿದ್ರಗೊಳಿಸಿದ್ದಾರೆ" ಎಂದರು.
"ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನದ 14, 15, 25, 26, 29ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ" ಎಂದು ಅಸಾದುದ್ದೀನ್ ಹೇಳಿದ್ದಾರೆ. "ಈ ಮೂಲಕ ಮೋದಿ ಸರ್ಕಾರ ಮುಸ್ಲಿಮರ ಎಲ್ಲಾ ಹಕ್ಕುಗಳನ್ನು ಕಸಿದುಕೊಂಡಿದೆ. ಮೋದಿ ಸರ್ಕಾರ ದೇಶದ ಮುಸ್ಲಿಮರ ವಿರುದ್ಧ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿದರು,(ಏಜೆನ್ಸೀಸ್).