

CSK: ಐಪಿಎಲ್ 18ನೇ ಆವೃತ್ತಿ ಶುರುವಾದಗಿನಿಂದಲೂ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳನ್ನೆಲ್ಲ ಐದು ಬಾರಿ ಚಾಂಪಿಯನ್ಸ್ ತಂಡ ಹೀನಾಯವಾಗಿ ಸೋತಿದೆ. ಕಳೆದ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಟಾಪ್ ಐದರಿಂದ ಆರನೇ ಸ್ಥಾನದಲ್ಲಿ ಉಳಿದುಕೊಳ್ಳುತ್ತಿದ್ದ ಸಿಎಸ್ಕೆ, ಈ ಬಾರಿಯ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಕೊಂಡಿದೆ. ಸದ್ಯ ಇದು ಫ್ರಾಂಚೈಸಿ ಅಭಿಮಾನಿಗಳಲ್ಲಿ ಭಾರೀ ಬೇಸರ ತಂದಿದೆ.
ಕಳೆದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಬದಲಿಗೆ ತಂಡದ ನಾಯಕತ್ವ ವಹಿಸಿಕೊಂಡ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ, ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದರು. ಆದರೆ, ಗೆಲುವಿನ ಕೇಕೆ ಹಾಕಲು ಸಾಧ್ಯವಾಗಲಿಲ್ಲ. ಇದು ಅವರ ಮೇಲಿನ ನಿರೀಕ್ಷೆ, ಭರವಸೆಗಳು ಮತ್ತಷ್ಟು ಕುಸಿಯುವಂತೆ ಮಾಡಿತು. ಈ ಕುರಿತಾಗಿ ಮಾಜಿ ಕ್ರಿಕೆಟಿಗರು ಕೂಡ ತೀವ್ರ ಟೀಕಿಸಿ ಮಾತನಾಡಿದ್ದರು. ಇಲ್ಲಿಯವರೆಗೆ ಒಂದು ಪಂದ್ಯ ಗೆದ್ದಿರುವ ಸಿಎಸ್ಕೆ, ಸತತ ಐದು ಸೋಲುಗಳನ್ನು ದಾಖಲಿಸಿದೆ. ಇಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡಲಿರುವ ಪಂದ್ಯವನ್ನು ಸಿಎಸ್ಕೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಪವರ್ಪ್ಲೇಯಿಂದ ಹಿಡಿದು ಪೂರ ಓವರ್ ಅಂತ್ಯದವರೆಗೂ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಸಿಎಸ್ಕೆ, ಶೀಘ್ರವೇ ಲೀಗ್ನಿಂದ ಹೊರಗುಳಿಯುವ ಅಂಚಿನಲ್ಲಿ ಸಾಗುತ್ತಿದೆ. ಇದು ಫ್ರಾಂಚೈಸಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಧೋನಿ ಕ್ರಮಾಂಕ ಮತ್ತು ಸಿಎಸ್ಕೆ ಸತತ ಸೋಲಿನ ಬಗ್ಗೆ ಕಡೆಗೂ ತುಟಿ ಬಿಚ್ಚಿರುವ ಕೋಚ್ ಸ್ಟೀಫನ್ ಫ್ಲೆಮಿಂಗ್, "ಧೋನಿಯ ಪ್ರಭಾವ ಸದಾ ಮಹತ್ವದ್ದಾಗಿರುತ್ತದೆ. ಆದರೆ, ಇಲ್ಲಿ ಅವರು ಭವಿಷ್ಯ ನುಡಿಯುವ ವ್ಯಕ್ತಿಯಲ್ಲ. ಧೋನಿ ಬಳಿ ಯಾವುದೇ ಜಾದು ಮಾಡುವ ವಿಶೇಷ ಶಕ್ತಿಯಿಲ್ಲ. ಅಕಸ್ಮಾತ್ ಅಂತಹ ಶಕ್ತಿ ಇದ್ದಿದ್ದರೆ, ಇಷ್ಟೊತ್ತಿಗೆ ಅದನ್ನು ಪ್ರಯೋಗ ಮಾಡಿರುತ್ತಿದ್ದರು" ಎಂದು ಎಲ್ಎಸ್ಜಿ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ಪ್ರೇರಣೆಯಾಗಿ ಬದಲಾಗುವ ಬಹಳಷ್ಟು ನೋವುಗಳು ನಮ್ಮಲ್ಲಿವೆ. ಇದು ಮಾತನಾಡುವುದರ ಬಗ್ಗೆ ಅಲ್ಲ, ಆಟಗಾರರು ಹೆಜ್ಜೆ ಹಾಕುವುದು, ತಮ್ಮ ಲಯವನ್ನು ಕಂಡುಕೊಳ್ಳುವುದು ಮತ್ತು ತಂಡದೊಳಗಿನ ಒಂದಷ್ಟು ಸಂದೇಹಗಳನ್ನು ನಿವಾರಿಸುವುದರ ಬಗ್ಗೆಯಾಗಿದೆ. ನಾವು ಸಣ್ಣ ಹೆಜ್ಜೆಗಳತ್ತ ಹೆಚ್ಚು ಗಮನಹರಿಸಬೇಕಾಗಿದೆ. ಆಟದಲ್ಲಿ ಉತ್ತಮ ಪ್ರದರ್ಶನ ನೀಡುವುದರತ್ತ ಸಾಗಬೇಕು. ಇಲ್ಲಿಂದ ಪೈಪೋಟಿ ಸ್ಪರ್ಧೆ ಪ್ರಾರಂಭಿಸಬೇಕು" ಎಂದು ಫ್ಲೆಮಿಂಗ್ ಹೇಳಿದರು,(ಏಜೆನ್ಸೀಸ್).