ಯತ್ನಾಳ ಪ್ರಕರಣ ಹುಬ್ಬಳ್ಳಿಗೆ ವರ್ಗಾವಣೆ, ಕೋಮು ಸೌಹಾರ್ದತೆ ಕಾಪಾಡಲು ಎಸ್‌ಪಿ ಲಕ್ಷ್ಮಣ ನಿಂಬರಗಿ ಮನವಿ

LAXMAN NIMBARAGI
ಲಕ್ಷ್ಮಣ ನಿಂಬರಗಿ
Published on

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹುಬ್ಬಳ್ಳಿಯ ರಾಮನವಮಿ ಆಚರಣೆ ವೇಳೆ ಪ್ರವಾದಿ ಮಹ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಹಿನ್ನೆಲೆ ದಾಖಲಾದ ಪ್ರಕರಣವನ್ನು ಹುಬ್ಬಳ್ಳಿಗೆ ವರ್ಗಾಯಿಸಲಾಗಿದ್ದು, ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕೆಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಮನವಿ ಮಾಡಿದ್ದಾರೆ.

ಯತ್ನಾಳರು ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ 3-4 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಯತ್ನಾಳ ಮನೆಗೆ ಮುತ್ತಿಗೆ ಹಾಕುವ ಬಗ್ಗೆ ವಿಡಿಯೋ ಹಾಗೂ ಆಡಿಯೋ ಸಂದೇಶಗಳು ವೈರಲ್ ಆಗುತ್ತಿದೆ.

ಮುಸ್ಲಿಂ ಸಮುದಾಯದ ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಮಹ್ಮದ್‌ರಫೀಕ್ ಟಪಾಲ್ ಇಂಜಿನಿಯರ್, ಅಲ್ತಾಫ್ ಖಾದ್ರಿ, ಮೈನುದ್ದೀನ ಬೀಳಗಿ, ಎಂ.ಸಿ. ಮುಲ್ಲಾ ಮತ್ತಿತರರು ಸಹ ಮಾತನಾಡಿದ್ದು, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಮುಸ್ಲಿಂ ಸಮುದಾಯದ ವ್ಯಕ್ತಿಗಳ ಬಗ್ಗೆ, ಧರ್ಮ ಗುರುಗಳ ಬಗ್ಗೆ ಉದ್ದೇಶಪೂರ್ವಕವಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಾ ಬಂದಿರುತ್ತಾರೆ. ಆದರೆ ಈಗ ಅವರು ಮುಸ್ಲಿಂ ಸಮುದಾಯದ ಪ್ರವಾದಿ ಮಹ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು, ಇದರಿಂದ ಮುಸ್ಲಿಂ ಸಮುದಾಯದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾರಣ ಶಾಸಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಇತ್ಯಾದಿಯಾಗಿ ಮಾತನಾಡಿರುತ್ತಾರೆ.

ಆದರೆ, ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದು, ಘಟನಾ ಸ್ಥಳದ ಆಧಾರದ ಮೇಲೆ ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ಕೈಕೊಂಡಿದ್ದಾರೆ. ಅಲ್ಲದೇ, ಏ.15 ರಂದು ಯಾವುದೇ ಪ್ರತಿಭಟನೆ ಇಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.

ಮಾತ್ರವಲ್ಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸಮುದಾಯದ ವ್ಯಕ್ತಿಗಳು ಅನಗತ್ಯ ಊಹಾಪೋಹ ಅಥವಾ ಸುಳ್ಳು ಸುದ್ದಿ, ವದಂತಿ, ಅವಹೇಳನಕಾರಿ ಹೇಳಿಕೆ, ಪೋಸ್ಟ್ ಇತ್ಯಾದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದೆಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net