

ಬೆಂಗಳೂರು: ಕಳೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ಗಳ ಅಂತರದಿಂದ ಸೋಲು ಕಂಡು, ಈ ಬಾರಿಯೂ ಕಪ್ ಗೆಲ್ಲುವ ಕನಸನ್ನು ಕನಸಾಗಿಯೇ ಉಳಿಸಿಕೊಂಡಿತು. ಇನ್ನು ಇದು ಹೀನಾಯ ಸೋಲಲ್ಲದೇ ಇದ್ದರೂ ಹೌದು, ಇದು ಹೀನಾಯ ಸೋಲು ಎಂದು ವಾದಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಅಭಿಮಾನಿಗಳು, ಆರ್ಸಿಬಿ ಆಟಗಾರರನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟೀಕಿಸಿದರು. ಸದ್ಯ ಈ ಬೆಳವಣಿಗೆ ಬೆಂಗಳೂರು ಅಭಿಮಾನಿಗಳನ್ನು ಭಾರೀ ಕೆರಳಿಸಿದೆ.
'ಈ ಸಲ ಕಪ್ ನಿಮ್ಮದಲ್ಲ' ಎಂದು ವಿರಾಟ್ ಕೊಹ್ಲಿ ಫೋಟೋವಿರುವ ಬ್ಯಾನರ್ ಹಿಡಿದು ಆರ್ಸಿಬಿ ತಂಡವನ್ನು ಹಿಯಾಳಿಸಿರುವ ಸಿಎಸ್ಕೆ ಅಭಿಮಾನಿಗಳು ವ್ಯಾಪಕವಾಗಿ ಟೀಕಿಸಿ, ವಿರಾಟ್ ಕೊಹ್ಲಿ ಮತ್ತು ತಂಡದ ಸಹ ಆಟಗಾರರನ್ನು ಟ್ರೋಲ್ ಮಾಡಿದ್ದಾರೆ. ಇನ್ನು ಇದೆಲ್ಲದರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ಆಟಗಾರ ಅಂಬಟಿ ರಾಯಡು ಕಳೆದ ಎಲಿಮಿನೇಟರ್ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದ್ದರು.
ಅದರಲ್ಲೂ ಆರ್ಆರ್ ವಿರುದ್ಧ ಸೋಲುತ್ತಿದ್ದಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುಮ್ಮನಾಗದ ರಾಯಡು, ತಮ್ಮ ಇನ್ಸ್ಟಾಗ್ರಾಂನಲ್ಲಿ ಸಿಎಸ್ಕೆ ಚಾಂಪಿಯನ್ಸ್ ಆಗಿ ಮೆರೆದ ವಿಡಿಯೋ ಹಂಚಿಕೊಳ್ಳುವ ಮೂಲಕ ಆರ್ಸಿಬಿ ಫ್ಯಾನ್ಸ್ಗಳ ಕೆಂಗಣ್ಣಿಗೆ ಮತ್ತೊಮ್ಮೆ ಗುರಿಯಾಗಿದ್ದಾರೆ. ಇದರಿಂದ ತೀವ್ರ ಕೆಂಡಾಮಂಡಲಗೊಂಡ ಆರ್ಸಿಬಿ ಅಭಿಮಾನಿಗಳು ಅಂಬಟಿ ರಾಯಡುಗೆ ಸಾಮಾಜಿಕ ಜಾಲತಾಣದಲ್ಲೇ ತಿರುಗೇಟು ನೀಡಿದ್ದು, ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಆದ್ರೆ, ಈ ಮಧ್ಯೆ ಶಾಕಿಂಗ್ ಅನಿಸಿದ್ದು, ಇದೇ ಸಿಎಸ್ಕೆ ತಂಡದ ಇನ್ನಿಬ್ಬರು ಸ್ಟಾರ್ ಆಟಗಾರರು ಕೂಡ ರಾಯಡು ಜತೆಗೆ ಸೇರಿ, ಆರ್ಸಿಬಿ ತಂಡದವರನ್ನು ಟೀಕಿಸಿದ್ದು ಅತೀವ ಬೇಸರ ಮೂಡಿಸಿದ್ದಲ್ಲದೇ, ಇವರಿಬ್ಬರ ಮೇಲಿದ್ದ ಗೌರವವನ್ನು ಕಳೆದುಕೊಳ್ಳುವಂತೆ ಮಾಡಿದೆ. ಅಂಬಟಿ ಹಂಚಿಕೊಂಡಿದ್ದ 2023ರಲ್ಲಿ ಸಿಎಸ್ಕೆ ಕಪ್ ಗೆದ್ದು, ಸಂಭ್ರಮಿಸಿದ ವಿಡಿಯೋಗೆ ಮತೀಶಾ ಪತಿರಾಣ ಮತ್ತು ದೀಪಕ್ ಚಹರ್ ಎಮೋಜಿಗಳನ್ನು ವ್ಯಕ್ತಪಡಿಸುವ ಮುಖೇನ ರಾಯಡು ಲೇವಡಿಗೆ ಸಾಥ್ ನೀಡಿರುವುದು ಸ್ಪಷ್ಟವಾಗಿದೆ,(ಏಜೆನ್ಸೀಸ್).