

ನವದೆಹಲಿ: ಮೊನ್ನೆ (ಮೇ. 1) ಲಖನೌದ ವಾಜಪೇಯಿ ಎಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಲಖನೌ ಸೂಪರ್ ಜೇಂಟ್ಸ್ (ಎಲ್ಎಸ್ಜಿ) ನಡುವೆ ನಡೆದ ಪಂದ್ಯವು ವಿವಾದದ ಕೇಂದ್ರ ಬಿಂದುವಾಯಿತು. ಪಂದ್ಯದ ಬಳಿಕ ಮೈದಾನದಲ್ಲಿ ಆಟಗಾರರು ವಾಗ್ವಾದಕ್ಕೆ ಇಳಿದಿದ್ದು ಕ್ರೀಡಾಲೋಕವನ್ನು ಚರ್ಚೆಗೆ ಎಳೆದುತಂದಿತು.
ಆರ್ಸಿಬಿಯ ವಿರಾಟ್ ಕೊಹ್ಲಿ ಹಾಗೂ ಎಲ್ಎಸ್ಜಿ ತಂಡದ ಮೆಂಟರ್ ಗೌತಮ್ ಗಂಭೀರ್ ಮತ್ತು ನವೀನ್ ಉಲ್ ಹಕ್ ನಡುವೆ ಮಾತಿನ ಚಕಮಕಿ ನಡೆಯಿತು. ಮೂವರು ಆಟಗಾರರಿಗೆ ಬಿಸಿಸಿಐ ದಂಡವನ್ನು ವಿಧಿಸಿದ್ದರೂ ವಿವಾದ ಮಾತ್ರ ಇನ್ನು ತಣ್ಣಗಾಗಿಲ್ಲ. ಮೈದಾನದಲ್ಲಿ ಕಿತ್ತಾಡಿಕೊಂಡಿದ್ದ ಆಟಗಾರರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ.
ಇದೀಗ ನವೀನ್ ಉಲ್ ಹಕ್ ಅವರು ಕೊಹ್ಲಿಯನ್ನು ಕೆಣಕಿದ್ದಾರೆ. ಪಂದ್ಯದ ಬಳಿಕ ನಡೆದ ಘಟನೆಯನ್ನು ಉಲ್ಲೇಖಿಸಿ, ಅದು ಹೇಗೆ ನಡೆಯಿತು ಮತ್ತು ಅದು ಹೇಗೆ ಹೋಗುತ್ತದೆಯೋ ನಿಮಗೆ ಅರ್ಹವಾದದ್ದನ್ನು ನೀವು ಪಡದೇ ಪಡೆಯುತ್ತೀರಿ ಎಂದು ಟಾಂಗ್ ನೀಡಿದ್ದಾರೆ. ಕೊಹ್ಲಿ ಹೆಸರನ್ನು ಹೇಳದಿದ್ದರೂ ನವೀನ್ ಉಲ್ ಹಕ್ ಟಾಂಗ್ ಕೊಟ್ಟಿರುವುದು ಕೊಹ್ಲಿಗೆ ಎಂಬುದು ಎಲ್ಲರಿಗೂ ತಿಳಿದಿದೆ.
ಇದಕ್ಕೂ ಮುನ್ನ ಕೊಹ್ಲಿ ಸಹ ಇನ್ಸ್ಟಾಗ್ರಾಂನಲ್ಲಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಸಂಗತಿಗಳು ಮತ್ತು ಸತ್ಯಗಳ ಬಗ್ಗೆ ಮಾತನಾಡಿದ್ದರು. ನಾವು ಕೇಳುವ ಪ್ರತಿಯೊಂದು ಒಬ್ಬರ ಅಭಿಪ್ರಾಯವೇ ಹೊರತು ಸತ್ಯವಲ್ಲ. ನಾವು ನೋಡುವುದೆಲ್ಲವೂ ಒಂದು ದೃಷ್ಟಿಕೋನವೇ ಹೊರತು ಸತ್ಯವಲ್ಲ" ಎಂದು ರೋಮನ್ ಚಕ್ರವರ್ತಿ ಮಾರ್ಕಸ್ ಆರೆಲಿಯಸ್ ಆಂಟೋನಿನಸ್ ಅವರ ಕೋಟ್ ಅನ್ನು ಉಲ್ಲೇಖಿಸಿ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮೊನ್ನೆ ನಡೆದ ಪಂದ್ಯದಲ್ಲಿ ಆರ್ಸಿಬಿ ನೀಡಿದ್ದ 126 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟದೇ ಎಲ್ಎಸ್ಜಿ ಸೋಲುಂಡಿತ್ತು. 20 ಓವರ್ಗಳಲ್ಲಿ ಕೇವಲ 108 ರನ್ ಕಲೆಹಾಕಿತು. ಗೆಲುವು ಸಾಧ್ಯತೆ ಇತ್ತು. ಆದರೆ, ಕೆ.ಎಲ್. ರಾಹುಲ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ನಿರ್ಣಾಯಕ ಪಂದ್ಯದಲ್ಲಿ ಎಲ್ಎಸ್ಜಿ ಪಂದ್ಯವನ್ನು ಕೈಚೆಲ್ಲಿತ್ತು. ಬಳಿಕ ಕೊಹ್ಲಿ ವಿಜಯೋತ್ಸವವನ್ನು ಆಚರಿಸುವಾಗ ಗೌತಮ್ ಗಂಭೀರ್ಗೆ ಟಾಂಗ್ ನೀಡಿದ್ದರು. ಏಕೆಂದರೆ ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಎಲ್ಎಸ್ಜಿ ಗೆದ್ದಾಗ ಇದೇ ಗೌತಮ್ ಗಂಭೀರ್, ಆರ್ಸಿಬಿ ಆರ್ಸಿಬಿ ಎಂದು ಮೈದಾನದಲ್ಲಿ ಕೂಗುತ್ತಿದ್ದ ಅಭಿಮಾನಿಗಳ ಕಡೆ ತಿರುಗಿ ಬಾಯಿ ಮೇಲೆ ಬೆರಳಿಟ್ಟು ಮೌನವಾಗಿರುವಂತೆ ಟಾಂಗ್ ನೀಡಿದರು. ಹೀಗಾಗಿ ಕೊಹ್ಲಿ ಅವರು ಮೊನ್ನೆ ನಡೆದ ಪಂದ್ಯದಲ್ಲಿ ತಿರುಗೇಟು ನೀಡಿದರು.
ಪಂದ್ಯ ಮುಗಿದ ಬಳಿಕ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ವೇಳೆ ಕೊಹ್ಲಿ ಹಾಗೂ ಲಖನೌ ತಂಡದ ಆರಂಭಿಕ ಕೈಲ್ ಮೇಯರ್ಸ್ ನಡುವೆ ಮೊದಲು ಮಾತಿನ ಚಕಮಕಿ ನಡೆದಿದೆ. ಆ ನಂತರ ಪಂದ್ಯ ವೇಳೆ ಎಲ್ಎಸ್ಜಿ ಬೌಲರ್ ನವೀನ್ ಉಲ್ ಹಕ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಉಭಯ ಆಟಗಾರರನ್ನು ಮ್ಯಾಕ್ಸ್ವೆಲ್ ಬೇರ್ಪಡಿಸಿದ್ದಾರೆ.
ಮೈದಾದನದಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದಕ್ಕೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 100ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಕಲಂ 2.21ರ ಅಡಿಯಲ್ಲಿ ಎರಡನೇ ಹಂತದ ಅಪರಾಧವನ್ನು ಗಂಭೀರ್ ಒಪ್ಪಿಕೊಂಡಿದ್ದಾರೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇ 100ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21ರ ಅಡಿಯಲ್ಲಿ 2ನೇ ಹಂತದ ಅಪರಾಧವನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ ಎಂದು ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಲಖನೌ ಸೂಪರ್ ಜೈಂಟ್ಸ್ ಬೌಲರ್ ನವೀನ್-ಉಲ್-ಹಕ್ ಅವರ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗಿದೆ. ನವೀನ್-ಉಲ್-ಹಕ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ಮೊದಲನೇ ಹಂತದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಕೊಹ್ಲಿಗೆ 1.07 ಕೋಟಿ ರೂ. ದಂಡವನ್ನು ಪಾವತಿಸಬೇಕಿದ್ದರೆ, ಗೌತಮ್ ಗಂಭೀರ್ ಅವರು 25 ಲಕ್ಷ ರೂ. ಪಾವಿತಿಸಬೇಕಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ 1.79 ಕೋಟಿ ರೂ. ಪಾವತಿಸಬೇಕಿದೆ. (ಏಜೆನ್ಸೀಸ್)