ಟಿ20 ವಿಶ್ವಕಪ್​ ಟೀಮ್​ನಿಂದ ಒಬ್ಬ ಸ್ಪಿನ್ನರ್​ನ ಕೈಬಿಡಿ! 'ಇವರನ್ನು' ಈಗಲೇ ಸೇರಿಸಿಕೊಳ್ಳಿ: ಬಿಸಿಸಿಐಗೆ 'ಬಜ್ಜಿ' ಸಲಹೆ

WhatsApp Image 2024-05-25 at 10.32.45 AM
Published on

ನವದೆಹಲಿ: ನಿನ್ನೆ (ಮೇ.24) ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಕ್ವಾಲಿಫೈರ್​ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಪ್ಯಾಟ್​ ಕಮ್ಮಿನ್ಸ್​ ಪಡೆ 36 ರನ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಫೈನಲ್​ಗೆ ಲಗ್ಗೆಯಿಟ್ಟ ಎಸ್​ಆರ್​ಎಚ್​, ಮತ್ತೊಮ್ಮೆ ಕೆಕೆಆರ್​ ಎದುರು ಟ್ರೋಫಿಗಾಗಿ ಸೆಣಸಾಡಲಿದೆ.

ಇನ್ನು ನಿನ್ನೆಯ ಪಂದ್ಯದಲ್ಲಿ ಎಸ್​ಆರ್​ಎಚ್​ ಪರ ಬ್ಯಾಟಿಂಗ್​ಗೆ ಇಳಿದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದ್ರೆ, ದ್ವಿತೀಯಾರ್ಧದಲ್ಲಿ ರಾಜಸ್ಥಾನ ರಾಯಲ್ಸ್​ ಬ್ಯಾಟ್ಸ್​ಮನ್​ಗಳನ್ನು ತನ್ನ ಬೌಲಿಂಗ್​ನಿಂದ ಕಾಡಿದ ಅಭಿಷೇಕ್​, ಬಾಲ್​ ಮೂಲಕವೇ ಕಮಾಲ್ ಮಾಡಿದರು. ಇದು ಕೂಡ ಸನ್​ರೈಸರ್ಸ್​ ಹೈದರಾಬಾದ್​ ಗೆಲುವಿಗೆ ಪ್ರಮುಖ ಕಾರಣವಾಯಿತು.

ಕ್ವಾಲಿಫೈರ್ 2 ಪಂದ್ಯದಲ್ಲಿ ತನ್ನ ಬೌಲಿಂಗ್ ಮೂಲಕ ಕ್ರೀಡಾ ಅಭಿಮಾನಿಗಳ ಗಮನಸೆಳೆದ ಅಭಿಷೇಕ್ ಶರ್ಮಾ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರ ಹುಬ್ಬೇರುವಂತೆ ಮಾಡಿದರು. ಇದೇ ವಿಷಯವನ್ನು ಮುಂದಿಟ್ಟು ಮಾತನಾಡಿದ ಟೀಂ ಇಂಡಿಯಾದ ಮಾಜಿ ಆಟಗಾರ, ಸ್ಪಿನ್ನರ್​ ಹರ್ಭಜನ್ ಸಿಂಗ್, "ಬ್ಯಾಟ್‌ನಲ್ಲಿ ವಿಫಲರಾದ ಅಭಿಷೇಕ್, ಬಾಲ್ ಮೂಲಕ ಕಮಾಲ್ ಮಾಡಿದ್ದು ನಿಜಕ್ಕೂ ಅದ್ಭುತವಾಗಿತ್ತು. ರಾಜಸ್ಥಾನ ಪಡೆಯ ಸ್ಟಾರ್​ ಬ್ಯಾಟ್ಸ್​ಮನ್​ಗಳಾದ ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರ ವಿಕೆಟ್​ ಪಡೆದ ಅಭೀಷೇಕ್, ನಾಲ್ಕು ಓವರ್‌ಗಳಲ್ಲಿ ಕೇವಲ 24 ರನ್ ನೀಡಿದ್ದಾರೆ" ಎಂದರು.

"ಈ ಬಾರಿ ವಿದೇಶದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ತಂಡದಲ್ಲಿ ಆಡಲು ಅಭಿಷೇಕ್ ಶರ್ಮಾ ಅರ್ಹರಿದ್ದಾರೆ. ಪ್ರಸ್ತುತ ನಾಲ್ಕು ಸ್ಪಿನ್ನರ್​ಗಳು ಟೀಮ್​​ನಲ್ಲಿದ್ದಾರೆ. ಅವರಲ್ಲಿ ಯಾರನ್ನಾದರೂ ಕೆಳಗಿಳಿಸಿ, ಅಭಿಷೇಕ್​ಗೆ ಅವಕಾಶ ಮಾಡಿಕೊಡಿ. ಬ್ಯಾಟ್​ ಮತ್ತು ಬಾಲ್​ನಿಂದ ಕಮಾಲ್ ಮಾಡುವ ಕಲೆ ಇವರಿಗಿದೆ. ಭಾರತ ತಂಡಕ್ಕೆ ಇಂತಹ ಪ್ರತಿಭಾವಂತ ಆಟಗಾರನ ಅವಶ್ಯಕತೆ ಖಂಡಿತ ಇದೆ" ಎಂದು ಬಜ್ಜಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net