

| ಹರ್ಷವರ್ಧನ್ ಬ್ಯಾಡನೂರು
ಚಿತ್ರ : ದ ಜಡ್ಜ್ಮೆಂಟ್
ನಿರ್ದೇಶನ : ಗುರುರಾಜ್ ಕುಲಕರ್ಣಿ (ನಾಡಗೌಡ)
ನಿರ್ಮಾಣ : ಜಿ9 ಎಂಟರ್ಟೇನ್ಮೆಂಟ್
ತಾರಾಗಣ : ರವಿಚಂದ್ರನ್, ದಿಗಂತ್, ಮೇನಾ ಗಾಂವ್ಕರ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಕೃಷ್ಣ ಹೆಬ್ಬಾಳೆ, ಸುಜಯ್ ಶಾಸ್ತ್ರಿ, ರಂಗಾಯಣ ರು ಮುಂತಾದವರು.
"ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಆದರೆ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು' ಎನ್ನುತ್ತದೆ ನ್ಯಾಯಶಾಸ್ತ್ರ. ನಿರ್ದೇಶಕ ಗುರುರಾಜ ಕುಲಕರ್ಣಿ "ದ ಜಡ್ಜ್ಮೆಂಟ್' ಕಥೆಯನ್ನೂ ಅದೇ ಹಿನ್ನೆಲೆಯಲ್ಲಿ ಮಾಡಿಕೊಂಡಿದ್ದಾರೆ. ಅದರಲ್ಲಿ ಕೊಲೆ, ಹವಾಲಾ ಹಣ, ಕ್ರಿಪ್ಟೋ ಕರೆನ್ಸಿ, ಭ್ರಷ್ಟಾಚಾರ, ಮಾಫಿಯಾ, ರಾಜಕೀಯ ಮೇಲಾಟ, ಸಾಮಾನ್ಯರ ಒದ್ದಾಟ, ಹೋರಾಟ, ಹೊಡೆದಾಟ, ಕೋರ್ಟ್ನಲ್ಲಿ ವಿಚಾರಣೆಯ ನೋಟ, ಭಾರತೀಯ ಕಾನೂನು ಸಂಹಿತೆಯ ಒಳನೋಟ… ಎಲ್ಲವೂ ಇದೆ. ಸಾಕಷ್ಟು ಅಧ್ಯಯನ ನಡೆಸಿ, ಹಳೆಯ ಕೇಸ್ಗಳನ್ನು ಹುಡುಕಿ, ಕಾಲ್ಪನಿಕ ಕಥೆಯಲ್ಲಿ ಹೂರಣದಂತೆ ಬೆರೆಸಿ, ನೈಜತೆಗೆ ಹತ್ತಿರವಿರುವಂತೆ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ ಗುರುರಾಜ್.
ಆತ ಅನಿಲ್ (ದಿಗಂತ್), ಕೊಲೆ ಆರೋಪದಲ್ಲಿ ಬಂಧಿಯಾಗುತ್ತಾನೆ. ಸರ್ಕಾರದ ಪರ ವಕೀಲ ಗೋವಿಂದ್ (ರವಿಚಂದ್ರನ್) ಕೋರ್ಟ್ನಲ್ಲಿ ವಾದ ಮಾಡಿ, ಅನಿಲ್ಗೆ 20 ವರ್ಷ ಜೈಲು ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತಾರೆ. ಆದರೆ, ಇನ್ನೆರಡು ಕೊಲೆಗಳು ನಡೆದು, ಹೊಸ ಟ್ವಿಸ್ಟ್ ಪಡೆಯುವ ಪ್ರಕರಣದ ಬೆನ್ನತ್ತುವ ಗೋವಿಂದ್ಗೆ ಹೊಸ ಹೊಸ ಸತ್ಯಗಳ ಅನಾವರಣವಾಗುತ್ತದೆ. ಅನಿಲ್ ವಿಷಯದಲ್ಲಿ ತಪು$್ಪ ಮಾಡುಬಿಟ್ಟೆನಾ? ಎಂದು ಅಪರಾಧ ಮನೋಭಾವ ಕಾಡಲಾರಂಭಿಸುತ್ತದೆ. ಹಾಗಾದರೆ ಅನಿಲ್ ಕೊಲೆ ಮಾಡಿಲ್ಲವೇ? ಅಥವಾ ಬೇರೆಯವರ ಅಪರಾಧ ಆತನ ಮೇಲೆ ಆರೋಪ ಬಂದಿರುತ್ತಾ? ನಿರಪರಾಧಿಯಾಗಿದ್ದರೂ ಆರೋಪ ಸಾಬೀತಾಗಿದ್ದು ಹೇಗೆ? ಗೋವಿಂದ್ ಮತ್ತೆ ಅನಿಲ್ ಪರ ನಿಲ್ಲುತ್ತಾರಾ? ಮುಂದೇನಾಗುತ್ತೆ ಎಂಬುದೇ "ದ ಜಡ್ಜ್ಮೆಂಟ್'.
ನಮ್ಮ ಸುತ್ತಮುತ್ತ ನಡೆದ, ನಡೆಯುತ್ತಿರುವ ಟನೆಗಳ ಸುತ್ತ ಕಥೆ ಮಾಡಿಕೊಂಡಿರುವುದು ಚಿತ್ರದ ಪ್ಲಸ್. "ಚೆಂಗಾರೆಡ್ಡಿ ವರ್ಸಸ್ ಆಂಧ್ರ ಪ್ರದೇಶ ಸರ್ಕಾರ 1996', "ಅಖಿಲೇಷ್ ಯಾದವ್ ವರ್ಸಸ್ ಬಿಹಾರ 2022', "ಶರತ್ ವರ್ಸಸ್ ಮಹಾರಾಷ್ಟ್ರ', "ಛಾಯಾ ಗುರ್ಜರ್ ವರ್ಸಸ್ ಮಧ್ಯ ಪ್ರದೇಶ', "ಅಮೀರ್ ಖಾನ್ ವರ್ಸಸ್ ಉತ್ತರಾಂಚಲ್' ಸೇರಿ ಹಲವು ಪ್ರಕರಣಗಳ ಕುರಿತು ರೆರೆನ್ಸ್ ನೀಡಿರುವುದು ಚಿತ್ರವನ್ನು ನೈಜತೆಗೆ ಹತ್ತಿರವಾಗಿಸಿದೆ. 151 ನಿಮಿಷಗಳ ಸಿನಿಮಾ ಗಟ್ಟಿ ಚಿತ್ರಕಥೆಯ ಮೂಲಕ ನೋಡಿಸಿಕೊಂಡು ಹೋಗುತ್ತದೆ. ಲಾಯರ್ ಗೋವಿಂದ್ ಪಾತ್ರದಲ್ಲಿ ರವಿಚಂದ್ರನ್, ಅಮಾಯಕ ಅನಿಲ್ ಆಗಿ "ಟ್ವಿಂಕಲ್ ಸ್ಟಾರ್' ದಿಗಂತ್, ಆತನ ಅಸಹಾಯಕ ತಂದೆಯಾಗಿ ರಂಗಾಯಣ ರು, ವಿಭಿನ್ನ ಮ್ಯಾನರಿಸಂ ಮೂಲಕ ಕೃಷ್ಣ ಹೆಬ್ಬಾಳೆ ಮಿಂಚಿದ್ದಾರೆ. ಆಗಾಗ ಸುಜಯ್ ಶಾಸ್ತ್ರಿ ನಗಿಸುತ್ತಾರೆ. ಉಳಿದಂತೆ ಮೇನಾ, ಧನ್ಯಾ, ಲಕ್ಷ್ಷಿ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. "ದ ಜಡ್ಜ್ಮೆಂಟ್' ಕನ್ನಡದ ಮಟ್ಟಿಗೆ ಅಪರೂಪದ ಕೋರ್ಟ್ರೂಮ್ ಥ್ರಿಲ್ಲರ್.