ಇಂದು ಬಿಸಿಸಿಐ ಎಜಿಎಂ; ಐಪಿಎಲ್‌ಗೆ ಹೊಸ ತಂಡಗಳ ಸೇರ್ಪಡೆ ಬಗ್ಗೆ ನಿರ್ಧಾರ

bcci meeting web
Published on

ಅಹಮದಾಬಾದ್: ಹಲವು ಮಹತ್ವದ ಅಂಶಗಳನ್ನು ನಿರ್ಧರಿಸುವ ದೃಷ್ಟಿಯಿಂದ ಪ್ರಮುಖವೆನಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 89ನೇ ವಾರ್ಷಿಕ ಮಹಾಸಭೆ (ಎಜಿಎಂ) ಗುರುವಾರ ನಡೆಯಲಿದೆ. ಎರಡು ಹೊಸ ಐಪಿಎಲ್ ತಂಡಗಳ ಸೇರ್ಪಡೆ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತೆರಿಗೆ ವಿನಾಯಿತಿ ಪಡೆಯುವುದು ಮತ್ತು ಹಲವು ಕ್ರಿಕೆಟ್ ಸಮಿತಿಗಳ ರಚನೆ ಮುಂತಾದ ಹಲವು ಅಜೆಂಡಾಗಳನ್ನು ಸಭೆ ಹೊಂದಿದೆ.

ಬಿಸಿಸಿಐನ ಹೊಸ ಉಪಾಧ್ಯಕ್ಷರಾಗಿ ರಾಜೀವ್ ಶುಕ್ಲಾ ಅವರು ಸಭೆಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಅವಿರೋಧವಾಗಿ ಆಯ್ಕೆಯಾಗುವುದು ಈಗಾಗಲೆ ಖಚಿತವೆನಿಸಿದೆ. ಬ್ರಿಜೇಶ್ ಪಟೇಲ್ ಅವರು ಐಪಿಎಲ್ ಆಡಳಿತ ಮಂಡಳಿಯ ಮುಖ್ಯಸ್ಥರಾಗಿ ಮುಂದುವರಿಯುವುದು ಕೂಡ ಸಭೆಯಲ್ಲಿ ಅಧಿಕೃತಗೊಳ್ಳಲಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಫ್ಯಾಂಟಸಿ ಗೇಮ್ ಸಹಿತ ಹಲವು ಕಂಪನಿಗಳ ಪ್ರಚಾರ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಸ್ವಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುವುದೇ ಎಂಬ ಬಗ್ಗೆಯೂ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಐಪಿಎಲ್‌ಗೆ 2 ಹೊಸ ತಂಡಗಳ ಸೇರ್ಪಡೆ ಖಚಿತವೆನಿಸಿದ್ದರೂ, ಅದು 2022ರ ಆವೃತ್ತಿಗೆ ಆಗಿರುತ್ತದೆ ಎನ್ನಲಾಗಿದೆ. 2021ರಲ್ಲಿ ಈಗಿರುವ 8 ತಂಡಗಳ ಟೂರ್ನಿಯೇ ನಡೆಯುವ ನಿರೀಕ್ಷೆ ಇದೆ. ‘ಬಿಸಿಸಿಐ ಒಂದು ವೇಳೆ 2021ರ ಐಪಿಎಲ್‌ಗೆ ಹೊಸ ತಂಡಗಳ ಸೇರ್ಪಡೆಗೆ ಮುಂದಾದರೂ, ಟೆಂಡರ್ ಪ್ರಕ್ರಿಯೆ, ಮೆಗಾ ಹರಾಜು ಪ್ರಕ್ರಿಯೆ ಮುಂತಾದವುಗಳನ್ನು ಲಭ್ಯವಿರುವ ಕಿರು ಅವಧಿಯಲ್ಲಿ ಆಯೋಜಿಸಲು ಸಾಧ್ಯವಾಗದು’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಹಮದಾಬಾದ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವೆನಿಸಿದೆ. ಹೀಗಾಗಿ ಇಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಸಲುವಾಗಿ ಈ ನಗರದಿಂದಲೇ ಹೊಸ ತಂಡವೊಂದರ ಆಯ್ಕೆಗೆ ಬಿಸಿಸಿಐ ಆದ್ಯತೆ ನೀಡಲಿದೆ ಎಂದೂ ಹೇಳಲಾಗಿದೆ. ಐಸಿಸಿಗೆ ಬಿಸಿಸಿಐ ಪ್ರತಿನಿಧಿಗಳಾಗಿ ಗಂಗೂಲಿ ಮತ್ತು ಜಯ್ ಷಾ ಆಯ್ಕೆಯಾಗುವ ನಿರೀಕ್ಷೆ ಇದೆ.

ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ?

2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯ ಬಗ್ಗೆ ಐಸಿಸಿ ಒಲವು ತೋರಿದೆ. ಇದಕ್ಕೆ ಬೆಂಬಲ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬಿಸಿಸಿಐ ಸಭೆಯಲ್ಲಿ ತನ್ನ ನಿಲುವು ತೆಗೆದುಕೊಳ್ಳಬೇಕಾಗಿದೆ. ಒಂದು ವೇಳೆ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಂಡರೆ ಬಿಸಿಸಿಐ ತನ್ನ ಸ್ವಾಯತ್ತತೆ ಕಳೆದುಕೊಂಡು, ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ (ಎನ್‌ಎಸ್‌ಎ್) ಪರಿಗಣಿಸಲ್ಪಡಲಿದ್ದು, ಕ್ರೀಡಾ ಸಚಿವಾಲಯದ ನಿಯಂತ್ರಣಕ್ಕೂ ಒಳಪಡುವ ಭೀತಿ ಹೊಂದಿದೆ.

ಬಿಸಿಸಿಐ ಸಭೆಯ ಪ್ರಮುಖ ಅಜೆಂಡಾ

ಉಪಾಧ್ಯಕ್ಷರ ಆಯ್ಕೆ; ಐಪಿಎಲ್ ಆಡಳಿತ ಮಂಡಳಿಗೆ ಇಬ್ಬರು ಪ್ರತಿನಿಧಿಗಳ ಆಯ್ಕೆ; 2020-21ರ ವಾರ್ಷಿಕ ಬಜೆಟ್ ಅಂಗೀಕಾರ; ಒಂಬುಡ್ಸ್‌ಮನ್-ಎಥಿಕ್ಸ್ ಅಧಿಕಾರಿ ನೇಮಕ ಅಂಗೀಕಾರ; ಕ್ರಿಕೆಟ್ ಸಮಿತಿ ಮತ್ತು ಸ್ಥಾಯಿ ಸಮಿತಿಯ ರಚನೆ; ಅಂಪೈರ್ಸ್‌ ಸಮಿತಿಯ ನೇಮಕ; ಐಸಿಸಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಪ್ರತಿನಿಧಿಗಳ ಆಯ್ಕೆ; 2 ಹೊಸ ಐಪಿಎಲ್ ತಂಡಗಳ ಟೆಂಡರ್‌ಗೆ ಒಪ್ಪಿಗೆ; 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ ಕುರಿತು ಮಂಡಳಿಯ ನಿಲುವು; ಐಸಿಸಿ ವಿಷಯಗಳ ಮಾಹಿತಿ ಪರಿಷ್ಕರಣೆ; ಎನ್‌ಸಿಎ ವಿಚಾರಗಳು; ಭಾರತದಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್; ಭಾರತದ ಎಫ್​ಟಿಪಿ ವೇಳಾಪಟ್ಟಿ.

ನೂತನ ಸಿಎಸಿ ರಚನೆ

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಪೂರ್ವಭಾವಿಯಾಗಿ ರಾಷ್ಟ್ರೀಯ ಆಯ್ಕೆ ಸಮಿತಿಗೆ ಮೂವರು ಹೊಸ ಸದಸ್ಯರನ್ನು ಆರಿಸುವ ಸಲುವಾಗಿ ನೂತನ ಕ್ರಿಕೆಟ್ ಸಲಹಾ ಸಮಿತಿಯನ್ನು (ಸಿಎಸಿ) ಸಭೆಯಲ್ಲಿ ನೇಮಿಸಲಾಗುವುದು. ಹಿಂದಿನ ಸಿಎಸಿಯನ್ನೇ ಸಾಧ್ಯತೆಯೂ ಅಧಿಕವಾಗಿದೆ. ಮದನ್ ಲಾಲ್, ಆರ್‌ಪಿ ಸಿಂಗ್ ಮತ್ತು ಸುಲಕ್ಷಣಾ ನಾಯ್ಕ ಒಳಗೊಂಡ ಹಿಂದಿನ ಸಿಎಸಿ, ಆಯ್ಕೆ ಸಮಿತಿಗೆ ಇಬ್ಬರು ಹೊಸ ಸದಸ್ಯರನ್ನಾಗಿ ಸುನೀಲ್ ಜೋಶಿ ಮತ್ತು ಹರ್ವಿಂದರ್ ಸಿಂಗ್ ಅವರನ್ನು ಕಳೆದ ಫೆಬ್ರವರಿಯಲ್ಲಿ ಆರಿಸಿತ್ತು. ಸಿಎಸಿ ರಚನೆಯಾದ ಬೆನ್ನಲ್ಲೇ ನೂತನ ಆಯ್ಕೆಗಾರರ ಆಯ್ಕೆಗಾಗಿ ಸಂದರ್ಶನ ಪ್ರಕ್ರಿಯೆಗಳು ನಡೆಯುವ ನಿರೀಕ್ಷೆ ಇದೆ. ಆಯ್ಕೆಗಾರರ ಹುದ್ದೆಗೆ ಈಗಾಗಲೆ ಅಜಿತ್ ಅಗರ್ಕರ್, ಅಬೆ ಕುರುವಿಲ್ಲಾ, ಮಣಿಂದರ್ ಸಿಂಗ್, ಚೇತನ್ ಶರ್ಮ, ಶಿವಸುಂದರ್ ದಾಸ್ ಸಹಿತ ಹಲವು ಮಾಜಿ ಕ್ರಿಕೆಟಿಗರು ಈಗಾಗಲೆ ಅರ್ಜಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net