

ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ನ ಸ್ಟಾರ್ ದಂಪತಿಗಳಾದ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಹೈದರಾಬಾದ್ನಲ್ಲಿ ಅಭ್ಯಾಸಕ್ಕೆ ಮರಳಿದ್ದಾರೆ. ಸ್ಟಾರ್ ದಂಪತಿ ಕರೊನಾ ಸೋಂಕಿತರಾಗಿದ್ದುದು ತಡವಾಗಿ ಬೆಳಕಿಗೆ ಬಂದಿದ್ದು, ಸೋಂಕಿನ ವಿರುದ್ಧದ ತಮ್ಮ ಹೋರಾಟದ ಅನುಭವವನ್ನು ಕಶ್ಯಪ್ ಇದೀಗ ಹಂಚಿಕೊಂಡಿದ್ದಾರೆ.
ಕರೊನಾ ಸೋಂಕಿನ ವಿರುದ್ಧದ ಹೋರಾಟದ ವೇಳೆ 2 ವಾರಗಳ ಸೈನಾ-ಕಶ್ಯಪ್ ಇಬ್ಬರೂ ಬಹುತೇಕ ಲಕ್ಷಣರಹಿತವಾಗಿಯೇ ಇದ್ದರು. ಇಬ್ಬರೂ ನೆಗಡಿ ಇದ್ದ ಕಾರಣದಿಂದಾಗಿ ಕರೊನಾ ಪರೀಕ್ಷೆಗೆ ಒಳಗಾಗಿದ್ದೆವು. ಪಾಸಿಟಿವ್ ವರದಿ ಬಂದ ನಂತರವೂ ಜ್ವರ 98.5 ಡಿಗ್ರಿಗಿಂತ ಮೇಲೇರಿರಲಿಲ್ಲ. ಆದರೆ ರುಚಿ ಮತ್ತು ವಾಸನೆ ಗ್ರಹಿಕೆ ಇರಲಿಲ್ಲ. ಮಸಾಲ ಚಿಪ್ಸ್ ತಿಂದರೂ ಅದರ ರುಚಿ ಸಿಗುತ್ತಿರಲಿಲ್ಲ ಎಂದು ಕಶ್ಯಪ್ ಹೇಳಿಕೊಂಡಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ ಗುರು ಸಾಯಿದತ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಕಾರಣದಿಂದಾಗಿ ಇಬ್ಬರೂ ಕರೊನಾ ಸೋಂಕಿತರಾಗಿದ್ದರು ಎನ್ನಲಾಗಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಒಟ್ಟು ನಾಲ್ವರು ಬ್ಯಾಡ್ಮಿಂಟನ್ ಆಟಗಾರರು ಸೋಂಕಿತರಾಗಿದ್ದರು. ಕಶ್ಯಪ್ ವರದಿ ಆರಂಭದಲ್ಲಿಯೇ ಪಾಸಿಟಿವ್ ಬಂದಿದ್ದರೆ, ಸೈನಾ ವರದಿ ಮೊದಲಿಗೆ ನೆಗೆಟಿವ್ ಬಂದಿತ್ತು. ಬಳಿಕ ಪಾಸಿಟಿವ್ ಆಗಿತ್ತು. ಅದರ ಬೆನ್ನಲ್ಲೇ ಅವರೂ ಐಸೋಲೇಷನ್ ಆಗಿದ್ದರು.
ಇದೀಗ ಬ್ಯಾಡ್ಮಿಂಟನ್ ಕೋರ್ಟ್ಗೆ ಅಭ್ಯಾಸಕ್ಕೆ ಮರಳಿರುವ ಸೈನಾ ಮತ್ತು ಕಶ್ಯಪ್ ಮುಂದಿನ ವರ್ಷಾರಂಭದಲ್ಲಿ ಥಾಯ್ಲೆಂಡ್ನಲ್ಲಿ ಮರಳಿ ಸ್ಪರ್ಧಾಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ.