

ನವದೆಹಲಿ: ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ತಂಡದ ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ ಮತ್ತು ಕೋರಿಯೋಗ್ರಾರ್ ಧನಶ್ರೀ ವರ್ಮ ಮಂಗಳವಾರ ಗುರುಗ್ರಾಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರ್ಮ ಲೇಕ್ ರೆಸಾರ್ಟ್‌ನಲ್ಲಿ ಹಿಂದು ಸಂಪ್ರದಾಯದನ್ವಯ ವಿವಾಹ ಸಮಾರಂಭ ನಡೆಯಿತು.
‘22.12.20; ನಾವು ಒಂದಾನೊಂದು ಕಾಲದಲ್ಲಿ ಆರಂಭಿಸಿದೆವು ಮತ್ತು ಅನಂತರ ಸುಖವಾಗಿ ಬದುಕಿದೆವು. ಯಾಕೆಂದರೆ ಕೊನೆಗೂ ಧನಶ್ರೀ ಮತ್ತು ಯಜುವೇಂದ್ರ ಚಾಹಲ್ ಒಂದಾದರು’ ಎಂದು ಚಾಹಲ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ವಿವಾಹದ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಧನಶ್ರೀ ವರ್ಮ ಕೂಡ ಇನ್‌ಸ್ಟಾಗ್ರಾಂನಲ್ಲಿ ವಿವಾಹದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಚಾಹಲ್ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಿ ತವರಿಗೆ ಮರಳಿದ್ದರು. ಕಳೆದ ಆಗಸ್ಟ್‌ನಲ್ಲಿ ಚಾಹಲ್ ಐಪಿಎಲ್ ಆಡಲು ತೆರಳುವುದಕ್ಕೆ ಮುನ್ನ ಧನಶ್ರೀ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಏಪ್ರಿಲ್‌ನಲ್ಲಿ ಲಾಕ್‌ಡೌನ್ ವೇಳೆ ಚಾಹಲ್ ಆನ್‌ಲೈನ್ ಮೂಲಕ ಧನಶ್ರೀ ಅವರಿಂದ ನೃತ್ಯ ಕಲಿಯಲಾರಂಭಿಸಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಧನಶ್ರೀ ದಂತವೈದ್ಯೆಯೂ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನಲ್ ಮತ್ತು ನೃತ್ಯ ಅಕಾಡೆಮಿಯನ್ನೂ ಹೊಂದಿದ್ದಾರೆ.