

ನವದೆಹಲಿ: ಕ್ರಿಕೆಟ್ನಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಬ್ಯಾಟಿಂಗ್ ಶೈಲಿ ಇರುತ್ತದೆ. ಕ್ರೀಸ್ನಲ್ಲಿ ನಿಂತುಕೊಳ್ಳುವ ಭಂಗಿಯಾಗಿರಬಹುದು ಅಥವಾ ಬ್ಯಾಟ್ ಬೀಸುವ ರೀತಿಯಾಗಿರಬಹುದು ಕೆಲವರು ವಿಭಿನ್ನ ಎನಿಸುತ್ತಾರೆ. ಅದೇ ರೀತಿಯಲ್ಲಿ ಪಾಕಿಸ್ತಾನದ ಫವಾದ್ ಅಲಮ್ ಅವರು ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ನಿಂತ ಪರಿ ಗಮನ ಸೆಳೆದಿದ್ದು, ಅದಕ್ಕೆ ಸಂಬಂಧಿಸಿದ ಫೋಟೋ ವೈರಲ್ ಆಗಿದೆ.
ಫವಾದ್ ಅವರ ಅಸಂಪ್ರಾದಾಯಿಕ ಬ್ಯಾಟಿಂಗ್ ಶೈಲಿಯು ಅನೇಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ಆದರೂ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಮೊದಲ ಬಾರಿಗೆ ಈ ರೀತಿಯ ಬ್ಯಾಟಿಂಗ್ ಶೈಲಿಯನ್ನು ಪ್ರಯೋಗಿಸಿ ಶೂನ್ಯಕ್ಕೆ ಔಟಾದಾಗ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿತ್ತು. ಕೊನೆಗೂ ಇದೇ ಶೈಲಿಯಲ್ಲಿ ಶತಕವನ್ನು ಸಿಡಿಸಿರುವ ಫವಾದ್ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ವಿಫಲವಾದ ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ ವಿನೂತನ ಬ್ಯಾಟಿಂಗ್ ಶೈಲಿಯಿಂದ 233 ಎಸೆತಗಳನ್ನು 139 ರನ್ಗಳನ್ನು ಫವಾದ್ ಕಲೆಹಾಕಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ಉತ್ತರ ನೀಡಿದರು.
ಈಗಾಗಲೇ ಟಿ20 ಸರಣಿ ಕೈಚೆಲ್ಲಿರುವ ಪಾಕ್
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕ್ ಈಗಾಗಲೇ ಕಿವೀಸ್ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿಯನ್ನು ಕೈಚೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ. (ಏಜೆನ್ಸೀಸ್)