

ಕೋಲ್ಕತ: ಏಕದಿನ ವಿಶ್ವಕಪ್ ಕ್ರಿಕೆಟ್ನ ಎರಡನೇ ಸೆಮಿಫೈನಲ್ ಇಂದು ಕೋಲ್ಕತದ ಈಡನ್ ಗಾರ್ಡನ್ ಮೈದಾನದಲ್ಲಿ ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿದ್ದು, ಯಾರು ಗೆಲ್ಲುತ್ತಾರೆ ಎಂಬ ಕುತೂಹಲದ ಜತೆಗೇ ಫಲಿತಾಂಶದ ಕುರಿತು ಇನ್ನೊಂದು ಸಂಗತಿಯೂ ಕೇಳಿ ಬರುತ್ತಿದೆ.
ಈ ಪಂದ್ಯದಲ್ಲಿ 24 ವರ್ಷಗಳ ಹಿಂದಿನ ಫಲಿತಾಂಶವೇ ಮರುಕಳಿಸಬಹುದಾ ಎಂಬ ಚರ್ಚೆಯೊಂದು ಕ್ರಿಕೆಟ್ ಅಭಿಮಾನಿಗಳ ನಡುವೆ ಕಂಡುಬಂದಿದೆ. ಅಷ್ಟಕ್ಕೂ 24 ವರ್ಷಗಳ ಹಿಂದಿನ ಆಟ-ತಂಡಗಳಿಗೂ ಇರುವ ಸಾಮ್ಯತೆ ಈ ಸೆಮಿಫೈನಲ್ಸ್ನಲ್ಲಿ ಕಂಡುಬಂದಿರುವುದೇ ಇಂಥದ್ದೊಂದು ಚರ್ಚೆಗೆ ಕಾರಣ.
ಇಂದಿನಂತೆ 1999ರ ವಿಶ್ವಕಪ್ ಕ್ರಿಕೆಟ್ನ ಸೆಮಿಫೈನಲ್ನಲ್ಲೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕ ತಂಡಗಳು ಸೆಣಸಾಡಿದ್ದವು. ಅಂದು ಆಸ್ಟ್ರೇಲಿಯಾ 49.2 ಓವರ್ಗಳಲ್ಲಿ 213 ರನ್ ಗಳಿಸಿತ್ತು. ಬಳಿಕ ದಕ್ಷಿಣ ಆಫ್ರಿಕ ತಂಡ 49.4 ಓವರ್ಗಳಲ್ಲಿ 213ಕ್ಕೆ ಆಲೌಟ್ ಆಗಿದ್ದರಿಂದ ಆ ಪಂದ್ಯ ಟೈ ಆಗಿತ್ತು.
ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆಡಿರುವ ದಕ್ಷಿಣ ಆಫ್ರಿಕ ತಂಡ 212 ರನ್ಗಳಿಗೆ ಆಲೌಟ್ ಆಗಿದೆ. ಅಂದರೆ ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಜಯ ಗಳಿಸಲು 213 ರನ್ ಗುರಿ ಸಾಧಿಸಬೇಕಿದೆ. 1999ರಲ್ಲಿ ಆಡಿದ್ದ ಇವೇ ತಂಡಗಳು ಇಂದೂ ಈ ಆಟದಲ್ಲೂ 213 ಗುರಿ ಹೊಂದಿರುವುದೇ ಕ್ರೀಡಾಭಿಮಾನಿಗಳಲ್ಲಿ ಇಂಥದ್ದೊಂದು ಲೆಕ್ಕಾಚಾರ ಹೊರಹೊಮ್ಮಲು ಕಾರಣ ಎನಿಸಿಕೊಂಡಿದೆ.