

ಮುಂಬೈ: ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಸೆಣಸಾಟದಲ್ಲಿ ಭರ್ಜರಿಯಾಗಿ ಆಡಿ ಬ್ಯಾಟಿಂಗ್ನಲ್ಲಿ ವಿರಾಟರೂಪ ದರ್ಶನ ಮಾಡಿರುವ ವಿರಾಟ್ ಕೊಹ್ಲಿ, 'ದೇವ್ರು' ಮೆಚ್ಚೋ ಆಟ ಆಡಿದ್ದಾರೆ.
ಅರ್ಥಾತ್, ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡುಲ್ಕರ್ ಅವರ ಎರಡು ದಾಖಲೆಗಳನ್ನು ಇಂದು ಒಂದೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಮುರಿದಿದ್ದು, ಅದಕ್ಕೆ ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಮೆಚ್ಚಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿಯ ರೆಕಾರ್ಡ್ ಬ್ರೇಕಿಂಗ್ ಆಟದ ಬೆನ್ನಿಗೇ ಸಚಿನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನಿಮ್ಮನ್ನು ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ ನನ್ನ ಪಾದಗಳನ್ನು ಮುಟ್ಟುವಂತೆ ತಂಡದ ಇತರ ಸದಸ್ಯರು ನಿಮ್ಮನ್ನು ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದರೆ ಶೀಘ್ರದಲ್ಲೇ ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನೀವು ನನ್ನ ಹೃದಯವನ್ನು ತಟ್ಟಿದ್ದೀರಿ. ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಬ್ಬ ಭಾರತೀಯ ನನ್ನ ದಾಖಲೆ ಮುರಿದಿದ್ದಕ್ಕೆ ನಾನು ಹೆಚ್ಚು ಸಂತೋಷಪಡಲು ಸಾಧ್ಯವಿಲ್ಲ. ಅದನ್ನು ವಿಶ್ವಕಪ್ನ ಸೆಮಿಫೈನಲ್ನಂಥ ದೊಡ್ಡ ವೇದಿಕೆಯಲ್ಲಿ ಅದೂ ನನ್ನ ತವರು ಮೈದಾನದಲ್ಲಿ ಮಾಡಿರುವುದು ಅತ್ಯದ್ಭುತ ಎನ್ನುವಂತಿದೆ ಎಂದು ಸಚಿನ್ ಹೇಳಿದ್ದಾರೆ.