3.2 ಓವರ್​ನಲ್ಲಿ ಒಂದು ರನ್ ನೀಡದೆ 7 ವಿಕೆಟ್; ವಿಶ್ವದಾಖಲೆ ಬರೆದ ಬೌಲರ್

Romalia
Published on

ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಕ್ರಿಕೆಟ್​ ಒಂದು ವಿಸ್ಮಯಕಾರಿ ಆಟವಾಗಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇದೀಗ ವಿಸ್ಮಯಕಾರಿ ಘಟನೆಯೊಂದರಲ್ಲಿ 17 ವರ್ಷದ ಆಟಗಾರ್ತಿ ಒಂದೇ ಒಂದು ರನ್ ನೀಡದೆ 7 ವಿಕೆಟ್ ಪಡೆದು ದಾಖಲೆ ಬರೆದಿರುವ ಅಪರೂಪದ ಕ್ಷಣ ಬೆಳಕಿಗೆ ಬಂದಿದೆ.

ಮಂಗೋಲಿಯಾ ಹಾಗೂ ಇಂಡೋನೇಷ್ಯಾ ಮಹಿಳಾ ತಂಡಗಳ ನಡುವಿನ ಪಂದ್ಯ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಇಂಡೋನೇಷ್ಯಾದ ಬೌಲರ್ ರೊಹ್ಮಾಲಿಯಾ ಒಂದೇ ಒಂದು ರನ್​ ನೀಡದೆ 7 ವಿಕೆಟ್​ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

3.2 ಓವರ್​ಗಳನ್ನು ಬೌಲ್​ ಮಾಡಿದ ರೊಹ್ಮಾಲಿಯಾ ಒಂದೇ ಒಂದು ರನ್ ನೀಡದೆ 7 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಕ್ರಿಕೆಟ್​ನಲ್ಲಿ ಒಬ್ಬ ಬೌಲರ್ ಏಳು ವಿಕೆಟ್ ಕಬಳಿಸುವುದು ಸಾಮಾನ್ಯ. ಆದರೆ ಒಂದೇ ಒಂದು ರನ್ ಬಿಟ್ಟುಕೊಡದೆ ಈ ಸಾಧನೆ ಮಾಡಿರುವುದು ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

Romalia

ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ಯಾರು ಮಾಡಲಾಗದ ಈ ವಿಶಿಷ್ಟ ಸಾಧನೆಯನ್ನು ಇಂಡೋನೇಷ್ಯಾ ಮಹಿಳಾ ತಂಡದ ಆಟಗಾರ್ತಿ ಮಾಡಿರುವುದು ಕ್ರೀಡಾ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡೋನೇಷ್ಯಾ ಮಹಿಳಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ನಂದಾ ಸಕಾರಿ (44 ಎಸೆತಗಳಲ್ಲಿ 61) ಬ್ಯಾಟಿಂಗ್​ ಫಲವಾಗಿ 151 ರನ್ ಗಳಿಸಿತು.

ಚೇಸಿಂಗ್ ಆರಂಭಿಸಿದ ಮಂಗೋಲಿಯಾ ತಂಡವನ್ನು ರೊಹ್ಮಾಲಿಯಾ ಕಟ್ಟಿಹಾಕಿದರು. ಅವರ ದಾಳಿಗೆ ನಲುಗಿದ ಎದುರಾಳಿ ತಂಡದ ಒಬ್ಬ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ. ತಂಡದ ಪರ ಸೆಂಡುರೆನ್ (7) ಅಧಿಕ ಸ್ಕೋರರ್ ಎನಿಸಿಕೊಂಡರು. ಬೌಲಿಂಗ್​ನಲ್ಲಿ ಮಿಂಚಿದ ರೋಹ್ಮಾಲಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net