More

    ವಿರಾಟ ರೂಪ, ಶ್ರೇಯಸ್​ ಸಿಡಿಲಬ್ಬರಕ್ಕೆ ತತ್ತರಿಸಿದ ಕಿವೀಸ್​ ಬೌಲರ್ಸ್​: 398 ರನ್​ಗಳ ಬೃಹತ್​ ಗುರಿ ನೀಡಿದ ಭಾರತ

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಸಕ್ತ ವಿಶ್ವಕಪ್​ ಟೂರ್ನಿಯ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಎದುರಾಳಿ ನ್ಯೂಜಿಲೆಂಡ್​ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಟೀಮ್​ ಇಂಡಿಯಾ ಬ್ಯಾಟರ್​ಗಳು ಕಿವೀಸ್​ ಪಡೆಗೆ 398 ರನ್​ಗಳ ಬೃಹತ್​ ಗುರಿ ನೀಡಿದೆ. ನಿರ್ಣಾಯಕ ಪಂದ್ಯದಲ್ಲಿ ವಿರಾಟ ರೂಪ ಪ್ರದರ್ಶಿಸಿದ ವಿರಾಟ್​ ಕೊಹ್ಲಿ ವೃತ್ತಿ ಜೀವನದ (117 ರನ್​, 113 ಎಸೆತ, 9 ಬೌಂಡರಿ, 2 ಸಿಕ್ಸರ್​) 50ನೇ ಶತಕ ಸಿಡಿಸಿ ಕ್ರಿಕೆಟ್​ ದೇವರು ಸಚಿನ್​ ದಾಖಲೆ ಮುರಿದು ಕ್ರಿಕೆಟ್​ ಲೋಕದ ಅಧಿಪತಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು.

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 397 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್​ ಶರ್ಮ ಮತ್ತು ಶುಭಮಾನ್​ ಗಿಲ್​ 71 ರನ್​ಗಳ ಜತೆಯಾಟದೊಂದಿಗೆ ಉತ್ತಮ ಆರಂಭ ಒದಗಿಸಿಕೊಟ್ಟರು. ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಸಿ ಬಿರುಸಿನ ಆಟವಾಡುತ್ತಾ ಕಿವೀಸ್​ ಬೌಲರ್​​ಗಳಲ್ಲಿ ನಡುಕು ಹುಟ್ಟಿಸಿದ ಹಿಟ್​ ಮ್ಯಾನ್​ ರೋಹಿತ್ (47)​ ಅರ್ಧಶತಕಕ್ಕೆ ಇನ್ನೂ 3 ರನ್​ ಬಾಕಿ ಇರುವಾಗ ಟಿಮ್​ ಸೌಥಿ ಬೌಲಿಂಗ್​ನಲ್ಲಿ ವಿಲಿಯಮ್ಸನ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

    ಬಳಿಕ ಶುಭಮಾನ್​ ಗಿಲ್​ ಜತೆಯಾದ ವಿರಾಟ್​ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್​ ಕಟ್ಟಿದರು. ರೋಹಿತ್​ಗಿಂತ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬ್ಯಾಟ್​ ಬೀಸುತ್ತಿದ್ದ ಗಿಲ್​ 65 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನೊಂದಿಗೆ ನಿರ್ಣಾಯಕ ಪಂದ್ಯದಲ್ಲಿ 79 ರನ್​ ಗಳಿಸಿ ಭರ್ಜರಿ ಆಟವಾಡುತ್ತಿದ್ದಾಗ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಹಠಾತ್‌ ಪೆವಿಲಿಯನ್‌ಗೆ ಮರಳಿದರು. ಬಳಿಕ ಕೊಹ್ಲಿ ಜತೆಗೂಡಿದ ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ನಲ್ಲಿ ಉತ್ತಮ ಸಾಥ್​ ನೀಡಿದರು.

    ವಿರಾಟ ರೂಪ

    ತಾಳ್ಮೆಯ ಆಟದೊಂದಿಗೆ ವಿಶ್ವಕಪ್​ ಟೂರ್ನಿಯ ಮಹತ್ವದ ಪಂದ್ಯದಲ್ಲಿ ವೃತ್ತಿಜೀವನದ ಅಮೋಘ ಇನಿಂಗ್ಸ್​ ಆಡಿದ ಚೇಸ್‌ ಮಾಸ್ಟರ್‌, ಸ್ಟಾರ್‌ ಕ್ರಿಕೆಟಿಗ ಮತ್ತು ಕ್ರಿಕೆಟ್‌ ಲೋಕದ ಕಿಂಗ್‌ ಕೊಹ್ಲಿ 117 ರನ್​ಗಳನ್ನು ಸಿಡಿಸಿದರು. ಇತ್ತೀಚೆಗೆ ಅಂದರೆ, ನ.5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿಯೂ ಅಬ್ಬರಿಸಿದ್ದ ಕೊಹ್ಲಿ, 35ನೇ ವರ್ಷದ ಹುಟ್ಟುಹಬ್ಬದ ದಿನದಂದೇ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆಯನ್ನ ಸರಿಗಟ್ಟಿದ್ದರು ಎಂಬುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು.

    ಶ್ರೇಯಸ್​ ಸಿಡಿಲಬ್ಬರದ ಬ್ಯಾಟಿಂಗ್

    ನ.12ರಂದು ನೆದರ್ಲೆಂಡ್ಸ್​ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ​ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ್ದ ಶ್ರೇಯಸ್​ ಅಯ್ಯರ್ 128 ರನ್​ ಗಳಿಸಿದ್ದರು. ಇಂದಿನ ನಿರ್ಣಾಯಕ ಪಂದ್ಯದಲ್ಲಿಯೂ ಶತಕ ಸಿಡಿಸಿ ಭಾರತಕ್ಕಿದ್ದ ಅತಿದೊಡ್ಡ ಚಿಂತೆಯಾದ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್​ ಕೊರತೆಯನ್ನು ಹೋಗಲಾಡಿಸಿದರು. ಕೇವಲ 70 ಎಸೆತಗಳನ್ನು ಎದುರಿಸಿದ ಅಯ್ಯರ್​ 4 ಬೌಂಡರಿ, 8 ಸಿಕ್ಸರ್​ಗಳ ನೆರವಿನಿಂದ 105 ರನ್​ ಕಲೆಹಾಕಿದರು. ಈ ಮೂಲಕ ಪ್ರಸಕ್ತ ವಿಶ್ವಕಪ್​ನಲ್ಲಿ ಎರಡನೇ ಶತಕವನ್ನು ಸಂಭ್ರಮಿಸಿದರು.

    ಉಳಿದಂತೆ ಸೂರ್ಯಕುಮಾರ್​ ಯಾದವ್​ 1 ರನ್​ ಗಳಿಸಿ ಔಟಾದರೆ, ಕೊನೆಯಲ್ಲಿ ಅಬ್ಬರಿಸಿದ ಕನ್ನಡಿಗ ಕೆ.ಎಲ್​ ರಾಹುಲ್​ 20 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ ನೆರವಿನಿಂದ 39 ರನ್​ ಗಳಿಸಿ ಅಜೇಯರಾಗಿ ಉಳಿದರು.

    ನ್ಯೂಜಿಲೆಂಡ್​ ಪರ ಟಿಮ್​ ಸೌಥಿ​ 2 ವಿಕೆಟ್​ ಪಡೆದರೆ, ಟ್ರೆಂಟ್​ ಬೋಲ್ಸ್​ 1 ವಿಕೆಟ್​ಗೆ ತೃಪ್ತಿಪಟ್ಟುಕೊಂಡರು. ಆದರೂ ಯಾವೊಬ್ಬ ಬೌಲರ್​ಗಳು ಕೂಡ ರನ್​​ ಎಂಬ ಟೀಮ್​ ಇಂಡಿಯಾ ಅಶ್ವಮೇಧವನ್ನು ತಡೆಯಲು ಸಾಧ್ಯವಾಗಲಿಲ್ಲ. ಪಂದ್ಯದ ಮೊದಲ ಓವರ್​ನಿಂದಲೇ ಕಿವೀಸ್​ ಬೌಲರ್​ಗಳನ್ನು ಮನಸೋ ಇಚ್ಛೆ ಬೆಂಡೆತ್ತಿದ ಭಾರತ 397 ರನ್​ಗಳ ಬೃಹತ್​ ರನ್​ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಕಿವೀಸ್​ ಮುಂದೆ ಇದೀಗ ಬಹು ದೊಡ್ಡ ಸವಾಲಿದೆ.

    ಒಂದೇ ಇನ್ನಿಂಗ್ಸ್​ನಲ್ಲಿ ‘ಕ್ರಿಕೆಟ್ ದೇವರ’ 2 ದಾಖಲೆ ಮುರಿದ ಕೊಹ್ಲಿ!; ಜತೆಗೆ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದ ವಿರಾಟ್

    ಜನ್ಮದಿನದಂದೇ ಕ್ರಿಕೆಟ್​ ದಿಗ್ಗಜನ ದಾಖಲೆ ಸರಿಗಟ್ಟಿದ್ದ ಕಿಂಗ್​ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts