

ಮುಂಬೈ: ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಗಳಿಸಿದೆ.
ವಿರಾಟ್ ಕೊಹ್ಲಿಯ ಭರ್ಜರಿ ಬ್ಯಾಟಿಂಗ್, ಮೊಹಮದ್ ಶಮಿಯ ಭಾರಿ ಬೌಲಿಂಗ್ನಿಂದಾಗಿ ಈ ಪಂದ್ಯ ವಿರಾಟಪರ್ವ-ವಿಜಯ'ದ-ಶಮಿ' ಆಗಿ ಪರಿಣಮಿಸಿದ್ದು, ಹತ್ತು ಇನ್ನಿಂಗ್ಸ್ ಪೈಕಿ ಹತ್ತರಲ್ಲೂ ಭಾರತ ಜಯಭೇರಿ ಬಾರಿಸಿದೆ.
ವಿರಾಟ್ ಕೊಹ್ಲಿ 117 ರನ್ಗಳನ್ನು ಗಳಿಸಿದ್ದಲ್ಲದೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಎರಡು ದಾಖಲೆಗಳನ್ನು ಇದೊಂದೇ ಇನ್ನಿಂಗ್ಸ್ನಲ್ಲಿ ಮುರಿಯುವ ಜತೆಗೆ ಒಂದೇ ವಿಶ್ವಕಪ್ ಪಂದ್ಯಾವಳಿಯಲ್ಲಿ 10 ಇನ್ನಿಂಗ್ಸ್ನಲ್ಲಿ 8ರಲ್ಲಿ ಅರ್ಧ ಶತಕ ಗಳಿಸಿದ ಏಕೈಕ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಇನ್ನು ಮೊಹಮ್ಮದ್ ಶಮಿ ಬರೀ 57 ರನ್ಗಳನ್ನು ನೀಡಿ ಏಳು ವಿಕೆಟ್ಗಳನ್ನು ಕಬಳಿಸಿ, ಈ ಪಂದ್ಯವನ್ನು 'ವಿಜಯದ ಶಮಿ' ಆಗಿಸಿದರು. ಶಮಿ ಇಂದು 7 ವಿಕೆಟ್ ಪಡೆಯುತ್ತಾರೆ ಎಂಬುದು ನಿನ್ನೆಯೇ ವ್ಯಕ್ತಿಯೊಬ್ಬರಿಗೆ ಕನಸು ಬಿದ್ದಿತ್ತು ಎಂಬ ಸಂಗತಿ ಇದೀಗ ಗಮನ ಸೆಳೆದಿದೆ.
ಡಾನ್ ಮಟೆಯೊ ಎಂಬ ಎಕ್ಸ್ ಹ್ಯಾಂಡಲ್ನಿಂದ ನಿನ್ನೆ ಮಧ್ಯಾಹ್ನ ಒಂದು ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ, 'ಸೆಮಿಫೈನಲ್ನಲ್ಲಿ ಶಮಿ ಏಳು ವಿಕೆಟ್ ಪಡೆದಿದ್ದನ್ನು ಕನಸಿನಲ್ಲಿ ಕಂಡೆ' ಎಂಬುದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದರು. ಕಾಕತಾಳೀಯ ಎಂಬಂತೆ ಅದು ಇಂದು ನಿಜವಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.