ವಿಶ್ವಕಪ್​ ಕ್ರಿಕೆಟ್​: ಫೈನಲ್​ ಪಂದ್ಯ ವೀಕ್ಷಿಸಲಿದ್ದಾರಾ ಪ್ರಧಾನಿ ಮೋದಿ?; ಭಾರತದ ಎದುರಾಳಿ ಯಾರು?

PM Modi
Published on

ನವದೆಹಲಿ: ಏಕದಿನ ವಿಶ್ವಕಪ್​ ಕ್ರಿಕೆಟ್​ನ ಎರಡನೇ ಸೆಮಿಫೈನಲ್ಸ್​ನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು 212 ರನ್​ ಗಳಿಸಿದೆ. ಇದೀಗ 213ರ ಗುರಿಯೊಂದಿಗೆ ಆಸ್ಟ್ರೇಲಿಯಾ ಬ್ಯಾಟಿಂಗ್​ಗೆ ಇಳಿದಿದೆ.

ಇಂದಿನ ಸೆಮಿಫೈನಲ್ಸ್​ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದಕ್ಕಿಂತ ಫೈನಲ್ಸ್​ನಲ್ಲಿ ಭಾರತದ ಎದುರಾಳಿಯಾಗಿ ಯಾವ ತಂಡ ಸೆಣಸಲಿದೆ ಎಂಬುದೇ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲವಾಗಿ ಕಾಣಿಸುತ್ತಿದೆ. ಇದರ ನಡುವೆಯೇ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಸಂತೋಷದ ಸಂಗತಿ ಎದುರಾಗಿದೆ.

ಅದೇನೆಂದರೆ, ನ. 19ರಂದು ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ. ಅಂದರೆ ಅಹಮದಾಬಾದ್​ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತದ ಆಟವನ್ನು ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.

ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಈ ಫೈನಲ್​ ಸೆಣಸಾಟ ನಡೆಯಲಿದ್ದು, ಪ್ರಧಾನಿ ಅದನ್ನು ವೀಕ್ಷಿಸುವ ಮೂಲಕ ಭಾರತದ ಕ್ರಿಕೆಟಿಗರ ಹುರುಪನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ ಎನ್ನಲಾಗಿದೆ.

ಈ ವರ್ಷದ ಆರಂಭದಲ್ಲಿ ಬಾರ್ಡರ್​-ಗವಾಸ್ಕರ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆಟವನ್ನು ಪ್ರಧಾನಿ ವೀಕ್ಷಿಸಿದ್ದು, ಅದಾದ ಬಳಿಕ ಅವರು ನೇರವಾಗಿ ಯಾವುದೇ ಕ್ರಿಕೆಟ್ ಪಂದ್ಯ ವೀಕ್ಷಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net