ವಿಶ್ವದಲ್ಲಿರುವ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನ ದಕ್ಷಿಣ ಧ್ರುವದ ಹಿಂದೆ ಬಿದ್ದಿರುವುದೇಕೆ? ಇಲ್ಲಿದೆ ಕಾರಣ…

Chandrayaan 3 South Pole
Published on

ನವದೆಹಲಿ: ಇಂದು ಸಂಜೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಚಂದ್ರಯಾನ-3 ನೌಕೆಯನ್ನು ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ಭಾರತ ಮಾತ್ರವಲ್ಲದೆ, ಇಡೀ ವಿಶ್ವವೇ ಎದುರು ನೋಡುತ್ತಿದೆ. ಈ ಒಂದು ಮಿಷನ್​ ಯಶಸ್ವಿಯಾದರೆ ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳು ಮತ್ತು ಚಂದ್ರನಲ್ಲಿ ಇದೆ ಎನ್ನಲಾದ ನೀರಿನ ಕಣಗಳ ಮೇಲಿನ ಜ್ಞಾನ ಮತ್ತಷ್ಟು ವಿಸ್ತಾರವಾಗಲಿದೆ.

ಒಂದು ವೇಳೆ ಚಂದ್ರನ ದಕ್ಷಿಣ ಧ್ರವದಲ್ಲಿ ಚಂದ್ರಯಾನ ನೌಕೆ ಲ್ಯಾಂಡ್​ ಆದರೆ, ಭಾರತದ ಪಾಲಿಗೆ ಸುವರ್ಣ ಯುಗವಾಗಲಿದೆ. ಏಕೆಂದರೆ ಈವರೆಗೂ ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗಿಲ್ಲ. ಇಲ್ಲಿ ಲ್ಯಾಂಡ್​ ಆಗುವುದು ತುಂಬಾ ಕಷ್ಟವೆಂದು ಹೇಳಲಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಈಗಾಗಲೇ ಚಂದ್ರನ ಅಂಗಳಕ್ಕೆ ಇಳಿದಿವೆ. ಆದರೆ, ದಕ್ಷಿಣ ಧ್ರುವದಲ್ಲಲ್ಲ. ಆದರೆ, ಭಾರತದ ಯಶಸ್ವಿಯಾದರೆ, ಈ ರಾಷ್ಟ್ರಗಳ ಸಾಲಿಗೆ ಸೇರುವುದಲ್ಲದೆ, ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಮಾಡಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಸಾಧಿಸಲಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಹೋಗಿ ಭಾರತದ ಚಂದ್ರಯಾನ 2 ವಿಫಲವಾಯಿತು. ಅಲ್ಲದೆ, ಮೊನ್ನೆ ಮೊನ್ನೆ ರಷ್ಯಾದ ಲೂನಾ 25 ಕೂಡ ಪತವಾಯಿತು. ಇದನ್ನು ಹೊರತುಪಡಿಸಿ ಜಪಾನ್​, ಇಸ್ರೇಲ್​ ನೌಕೆಗಳಿಂದಲೂ ಈ ಪ್ರಯತ್ನ ನಡೆದಿದೆ. ಆದರೆ, ಯಾವುದು ಕೂಡ ಸಕ್ಸಸ್​ ಆಗಿಲ್ಲ. ಕಳೆದ ಚಂದ್ರಯಾನ 2 ಸಂದರ್ಭದಲ್ಲೂ ಲ್ಯಾಂಡಿಂಗ್​ ಹಂತದಲ್ಲೇ ಯೋಜನೆ ವಿಫಲವಾಯಿತು. ಆದರೆ, ಈ ಬಾರಿ ಫಲಪ್ರದವಾಗಲಿ ಎಂದು ಅಸಂಖ್ಯಾತ ಭಾರತೀಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಚಂದ್ರನ ಮೇಲೆ ವಿಜ್ಞಾನಿಗಳು ನೀರನ್ನು ಕಂಡು ಹಿಡಿದಿದ್ಹೇಗೆ?

1960ರ ಆರಂಭದಲ್ಲಿ ನಾಸಾದ ಅಪೊಲೋ ಮಿಷನ್​ ಮುನ್ನ ಚಂದ್ರನ ಮೇಲೆ ನೀರಿನ ಸಾಧ್ಯತೆಗಳ ಬಗ್ಗೆ ವಿಜ್ಞಾನಿಗಳು ಅಂದಾಜಿಸಿದ್ದರು. 1960ರ ನಂತರ ಮತ್ತು 1970ರ ದಶಕದ ಆರಂಭದಲ್ಲಿ ವಿಶ್ಲೇಷಣೆಗಾಗಿ ಹಿಂತಿರುಗಿದ ಅಪೊಲೋ ಮಿಷನ್​ ಸಿಬ್ಬಂದಿ ತಂದಂತಹ ಮಾದರಿಗಳು ಶುಷ್ಕವಾಗಿ ಕಂಡುಬಂದವು. 2008ರಲ್ಲಿ ಇದೇ ಮಾದರಿಗಳನ್ನು ಬ್ರೌನ್​ ಯೂನಿವರ್ಸಿಟಿ ಸಂಶೋಧಕರು ಹೊಸ ಟೆಕ್ನಾಲಜಿಯ ಮೂಲಕ ಮರುಪರಿಶೀಲನೆ ಮಾಡಿದಾಗ ಚಂದ್ರನ ಮಣ್ಣಿನ ಸಣ್ಣ ಕಣಗಳಲ್ಲಿ ಹೈಡ್ರೋಜನ್ ಇರುವುದು ಪತ್ತೆಯಾಯಿತು. 2009ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-1 ಪ್ರೋಬ್‌ನಲ್ಲಿದ್ದ ನಾಸಾ ಉಪಕರಣವು ಚಂದ್ರನ ಮೇಲ್ಮೈಯಲ್ಲಿ ನೀರನ್ನು ಪತ್ತೆ ಮಾಡಿತು. ​ಅದೇ ವರ್ಷ ಮತ್ತೊಂದು ನಾಸಾ ಪ್ರೋಬ್​ನಲ್ಲಿ ದಕ್ಷಿಣ ಧ್ರುವದ ಚಂದ್ರನ ಮೇಲ್ಮೈ ಕೆಳಗೆ ನೀರಿನ ಮಂಜುಗಡ್ಡೆ ಇರುವುದನ್ನು ಪತ್ತೆ ಮಾಡಿತು. ಈ ಹಿಂದಿನ ನಾಸಾ ಮಿಷನ್ 1998ರ ಲೂನಾರ್ ಪ್ರಾಸ್ಪೆಕ್ಟರ್, ದಕ್ಷಿಣ ಧ್ರುವದ ನೆರಳಿನ ಕುಳಿಗಳಲ್ಲಿ ನೀರಿನ ಮಂಜುಗಡ್ಡೆಯ ಹೆಚ್ಚಿನ ಸಾಂದ್ರತೆಯಿದೆ ಎಂಬುದಕ್ಕೆ ಪುರಾವೆಗಳನ್ನು ಕಂಡುಹಿಡಿದಿದೆ.

ಚಂದ್ರನ ಮೇಲೆ ನೀರು ಏಕೆ ಮುಖ್ಯ?

ವಿಜ್ಞಾನಿಗಳು ಪ್ರಾಚೀನ ನೀರಿನ ಮಂಜುಗಡ್ಡೆಯ ಪಾಕೆಟ್​ಗಳ ಮೇಲೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಏಕೆಂದರೆ ಅವು ಚಂದ್ರನ ಜ್ವಾಲಾಮುಖಿಗಳು ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳು ಭೂಮಿಗೆ ತಲುಪಿಸಿದ ವಸ್ತು ಮತ್ತು ಸಾಗರಗಳ ಮೂಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬಹುದು. ಒಂದು ವೇಳೆ ಚಂದ್ರನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಂಜುಗಡ್ಡೆ ಇದ್ದಲ್ಲಿ, ಇದು ಚಂದ್ರನ ಆಳವಾದ ಸಂಶೋಧನೆಗೆ ಕುಡಿಯುವ ನೀರಿನ ಮೂಲವಾಗಬಹುದು ಮತ್ತು ತಂಪಾದ ಉಪಕರಣವಾಗಿ ಸಹಾಯ ಮಾಡಬಹುದು. ಇಷ್ಟೇ ಅಲ್ಲದೆ, ಚಂದ್ರ ಮತ್ತು ಮಂಗಳ ಗಣಿಗಾರಿಕೆಯ ಮಿಷನ್​ಗೆ ಇಂಧನ ಮತ್ತು ಆಕ್ಸಿಜನ್​ಗಾಗಿ ಹೈಡ್ರೋಜನ್ ಉತ್ಪತಿಗೆ​ ನೆರವಾಗಲಿದೆ. 1967ರ ವಿಶ್ವಸಂಸ್ಥೆಯ ಬಾಹ್ಯಾಕಾಶ ಒಪ್ಪಂದವು ಯಾವುದೇ ರಾಷ್ಟ್ರವು ಚಂದ್ರನ ಮಾಲೀಕತ್ವವನ್ನು ಪಡೆದುಕೊಳ್ಳುವುದನ್ನು ನಿಷೇಧಿಸುತ್ತದೆ ಮತ್ತು ವಾಣಿಜ್ಯ ಕಾರ್ಯಾಚರಣೆಗಳನ್ನು ನಿಲ್ಲಿಸುವ ಯಾವುದೇ ನಿಬಂಧನೆ ಇಲ್ಲ. ಚಂದ್ರನ ಪರಿಶೋಧನೆ ಮತ್ತು ಅದರ ಸಂಪನ್ಮೂಲಗಳ ಬಳಕೆಗಾಗಿ ಒಂದಿಷ್ಟು ನಿಯಮಗಳನ್ನು ಸ್ಥಾಪಿಸಲು ಅಮೆರಿಕ ನೇತೃತ್ವದಲ್ಲಿ ಪ್ರಯತ್ನ ನಡೆದಿದ್ದು, ಇದಕ್ಕೆ 27 ರಾಷ್ಟ್ರಗಳು ಸಹಿ ಹಾಕಿವೆ. ಆದರೆ, ಚೀನಾ ಮತ್ತು ರಷ್ಯಾ ಸಹಿ ಮಾಡಿಲ್ಲ.

ದಕ್ಷಿಣ ಧ್ರವದಲ್ಲಿ ಲ್ಯಾಂಡಿಂಗ್​ ಕಷ್ಟವೇಕೆ?

ಚಂದ್ರನ ಸೌಥ್​ ಪೋಲ್​ ಅಥವಾ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್​ ಮಾಡುವ ಪ್ರಯತ್ನಗಳು ಈ ಹಿಂದೆಯೇ ವಿಫಲವಾಗಿವೆ. ಕಳೆದ ಮಂಗಳವಾರವಷ್ಟೇ ರಷ್ಯಾದ ಲೂನಾ 25 ಪತಗೊಂಡಿದೆ. ಈ ಹಿಂದೆ ಚಂದ್ರನ ಸಮಭಾಜಕ ಪ್ರದೇಶದಲ್ಲಿ ಮಾತ್ರ ಯಶಸ್ವಿ ಲ್ಯಾಂಡಿಂಗ್​ ನಡೆದಿದೆ. ಇದರಲ್ಲಿ ಅಮೆರಿಕ, ರಷ್ಯಾ, ಚೀನಾ ಮತ್ತು ಫ್ರಾನ್ಸ್​ ಯಶಸ್ಸು ಸಾಧಿಸಿವೆ. ಆದರೆ, ದಕ್ಷಿಣ ಧ್ರುವದಲ್ಲಿ ಸಮತಟ್ಟಾದ ಪ್ರದೇಶಗಳು ವಿರಳ ಎನ್ನಲಾಗಿದೆ. ಅಲ್ಲಿ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿದೆ. ಹೀಗಾಗಿ ಲ್ಯಾಂಡಿಂಗ್​ ತುಂಬಾ ಕಷ್ಟವಾಗಿದೆ.

ಸದ್ಯ ಇಸ್ರೋದ ಚಂದ್ರಯಾನ 3 ಮಿಷನ್​ ಲ್ಯಾಂಡಿಂಗ್​ ಪ್ರಯತ್ನಕ್ಕೆ ಕೈಹಾಕಿದೆ. ಇಂದು ಸಂಜೆ 6 ಗಂಟೆಗೆ ಲ್ಯಾಂಡಿಂಗ್​​ ಕಾರ್ಯಾಚರಣೆ ಆರಂಭವಾಗಲಿದೆ. ಆದರೆ, ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ಪ್ರಕ್ರಿಯೆಯಲ್ಲಿ ಕೊನೆಯ 20 ನಿಮಿಷ ತುಂಬಾ ನಿರ್ಣಾಯಕವಾಗಿದೆ. ಒಂದು ರೀತಿಯಲ್ಲಿ ಟಿ20 ಪಂದ್ಯದ ಅಂತಿಮ ಓವರ್​ ಇದ್ದಂತೆ ಎನ್ನಬಹುದು. ಏಕೆಂದರೆ ಚಂದ್ರಯಾನ 2 ಇದೇ ಹಂತದಲ್ಲಿ ಫೇಲ್​ ಆಗಿತ್ತು.

ಹೇಗಿರಲಿದೆ ಲ್ಯಾಂಡಿಂಗ್​ ಪ್ರಕ್ರಿಯೆ?

ಇಸ್ರೋದ ಬಾಹುಬಲಿ ರಾಕೆಟ್​ ಅಥವಾ ಲಾಂಚ್​ ವೆಹಿಕಲ್​ ಜುಲೈ 14ರಂದು ಚಂದ್ರಯಾನ 3 ನೌಕೆಯನ್ನು ಹೊತ್ತು ನಭಕ್ಕೆ ಜಿಗಿಯಿತು. ಬಳಿಕ ಚಂದ್ರಯಾನ ನೌಕೆಯು ಭೂ ಕಕ್ಷೆಯನ್ನು ಸೇರುವಲ್ಲಿ ಯಶಸ್ವಿಯಾಯಿತು. ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲು ಚಂದ್ರಯಾನ 3 ಭೂಮಿಯ ಸುತ್ತ ಹಲವು ಎಲಪ್ಟಿಕಲ್​ ರೌಂಡ್​ ಹಾಕಿತು. ಆಗಸ್ಟ್​ 1ರಂದು ಚಂದ್ರಯಾನ ತನ್ನ 3.84 ಲಕ್ಷ ಕಿ.ಮೀ ಜರ್ನಿಯಲ್ಲಿ ಭೂಮಿಯನ್ನು ಬಿಟ್ಟು ಚಂದ್ರನ ಕಡೆ ಸಾಗಿತು. ಆ. 5ರಂದು ಚಂದ್ರಯಾನ ಉಪಗ್ರಹ ಚಂದ್ರನ ಕಕ್ಷೆಯನ್ನು ಪ್ರವೇಶಿಸುವಲ್ಲಿ ಯಶಸ್ಸು ಸಾಧಿಸಿತು. ಚಂದ್ರನ ಕಕ್ಷೆಯಲ್ಲಿ ಯಾವುದೇ ಸಮಸ್ಯೆಯಾಗದೇ ಹಲವು ದಿನಗಳವರೆಗೆ ಚಂದ್ರಯಾನ ನೌಕೆ ಗಿರಕಿ ಹೊಡೆಯಿತು.

ಈ ಪ್ರಯಾಣದ ಮಹತ್ವದ ಘಟ್ಟವಾದ ಪ್ರೊಪಲ್ಸನ್​ ಮಾಡ್ಯೂಲ್​ನಿಂದ ವಿಕ್ರಮ್​ ಲ್ಯಾಂಡರ್​ ಬೇರ್ಪಡುವಿಕೆ ಕಾರ್ಯ ಆ.17ರಂದು ಯಶಸ್ಸಿಯಾಗಿ ನಡೆಯಿತು. ಈ ವೇಳೆ ಚಂದ್ರಯಾನ ನೌಕೆ ಚಂದ್ರನಿಂದ 153 ಕಿ.ಮೀ ನಿಂದ 163 ಕಿ.ಮೀ ಆರ್ಬಿಟ್​ನಲ್ಲಿ ಸುತ್ತುತ್ತಿತ್ತು. ಇದೀಗ ಪ್ರೊಪಲ್ಸನ್​ ಮಾಡ್ಯೂಲ್​ ಚಂದ್ರನಿಂದ 153 ಕಿ.ಮೀ ನಿಂದ 163 ಕಿ.ಮೀ ಆರ್ಬಿಟ್​ನಲ್ಲೇ ತನ್ನ ಕಕ್ಷೆಯ ಸುತ್ತುವಿಕೆ ಕಾರ್ಯವನ್ನು ಮುಂದುವರಿಸಿದೆ.

ಇದಾದ ಬಳಿಕ ವಿಕ್ರಮ್ ಲ್ಯಾಂಡರ್ ಅನ್ನು 134 ಕಿಮೀ ಹಾಗೂ 25 ಕಿಮೀ ದೀರ್ಘವೃತ್ತದ ಕಕ್ಷೆಯಲ್ಲಿ ಚಂದ್ರನ ಮೇಲ್ಮೈಗೆ ಹತ್ತಿರ ತರಲಾಯಿತು. ಚಂದ್ರಯಾನ 2 ಕೂಡ ಈ ಹಂತದವರೆಗೂ ಯಶಸ್ಸು ಸಾಧಿಸಿತ್ತು. ಆದರೆ, ಲ್ಯಾಂಡಿಂಗ್​ ದಿನ 20 ನಿಮಿಷಗಳ ಕಾರ್ಯಾಚರಣೆ ಸಂದರ್ಭದಲ್ಲಿ ವಿಫಲವಾಯಿತು. ಇದೀಗ ಚಂದ್ರಯಾನ 3 ಕೂಡ ಇದೇ ಹಂತದಲ್ಲಿದೆ. ಬೆಂಗಳೂರಿನ ಇಸ್ರೋ ಕಚೇರಿಯಿಂದ ಮಾನಿಟರ್​ ಮಾಡಲಾಗುತ್ತಿದ್ದು, ವಿಕ್ರಮ್​ ಲ್ಯಾಂಡರ್​, ಚಂದ್ರನಿಂದ 25 ಕಿ.ಮೀ ಎತ್ತರದಿಂದ ಅವರೋಹಣ ಕ್ರಮದಲ್ಲಿ ಚಂದ್ರನ ಮೇಲೆ ಇಳಿಯಲು ಪ್ರಯಾಣ ಆರಂಭಿಸಲಿದೆ.

ಈ ಅವರೋಹಣ ಇಳಿಕಾ ಕ್ರಮದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಸೆಕೆಂಡಿಗೆ 1.68 ಕಿಮೀ ವೇಗದಲ್ಲಿ ಚಲಿಸಲು ಪ್ರಾರಂಭಿಸುತ್ತದೆ, ಇದು ಗಂಟೆಗೆ ಸುಮಾರು 6048 ಕಿಮೀ. ಈ ವೇಗ ವಿಮಾನದ ವೇಗಕ್ಕಿಂತ ಹತ್ತು ಪಟ್ಟು ಹೆಚ್ಚು ಎಂಬುದೇ ಅಚ್ಚರಿಯ ಸಂಗತಿ. ಇಳಿಯುವ ವೇಳೆ ವಿಕ್ರಮ್ ಲ್ಯಾಂಡರ್ ತನ್ನ ಎಲ್ಲ ಇಂಜಿನ್‌ಗಳ ಫೈರಿಂಗ್​ ಅನ್ನು ನಿಧಾನಗೊಳ್ಳುತ್ತದೆ. ಆದರೆ, ಲ್ಯಾಂಡರ್ ಈ ವೇಳೆ ಚಂದ್ರನ ಮೇಲ್ಮೈಗೆ ಬಹುತೇಕ ಅಡ್ಡಲಾಗಿ ಚಲಿಸುತ್ತದೆ. ಇದು ಸುಮಾರು 11 ನಿಮಿಷಗಳ ಕಾಲ ನಡೆಯುವ ರಫ್ ಬ್ರೇಕಿಂಗ್ ಹಂತ ಎಂದು ಕರೆಯಲ್ಪಡುತ್ತದೆ.

ಇದಾದ ಬಳಿಕ ಕೆಲವು ತಂತ್ರಗಳ ಮೂಲಕ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಗೆ ಲಂಬವಾಗಿ ಮಾಡಲಾಗುತ್ತದೆ, ಇದರೊಂದಿಗೆ ‘ಸೂಕ್ಷ್ಮ ಬ್ರೇಕಿಂಗ್ ಹಂತ’ ಪ್ರಾರಂಭ ಮಾಡಲಾಗುತ್ತದೆ. ಚಂದ್ರಯಾನ-2 ನೌಕೆಯ ವಿಕ್ರಮ್ ಲ್ಯಾಂಡರ್ ನಿಯಂತ್ರಣ ತಪ್ಪಿ ಪತನಗೊಂಡಾಗ ಅದು ಕೂಡ ಇದೇ ಹಂತದಲ್ಲಿತ್ತು. ಚಂದ್ರನ ಮೇಲ್ಮೈಯಿಂದ 800 ಮೀಟರ್‌ಗಳಷ್ಟು ಎತ್ತರದಲ್ಲಿ, ಸಮತಲ ಮತ್ತು ಲಂಬವಾದ ವೇಗಗಳು ಶೂನ್ಯಕ್ಕೆ ಬರುತ್ತವೆ ಮತ್ತು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಸುಳಿದಾಡುತ್ತದೆ ಮತ್ತು ಲ್ಯಾಂಡಿಂಗ್ ಸ್ಟ್ರಿಪ್ ಅನ್ನು ಸಮೀಕ್ಷೆ ಮಾಡುತ್ತದೆ.

ವಿಕ್ರಮ್ ಲ್ಯಾಂಡರ್ 150 ಮೀಟರ್‌ ಎತ್ತರದಲ್ಲಿ ಮತ್ತೊಮ್ಮೆ ಸುಳಿದಾಡಲು ಕೆಳಗೆ ಇಳಿಯುತ್ತದೆ. ಬಳಿಕ ಅಪಾಯಗಳ ಪತ್ತೆಗಾಗಿ ಚಿತ್ರಗಳನ್ನು ತೆಗೆಯುವುದು ಮತ್ತು ಅತ್ಯುತ್ತಮ ಲ್ಯಾಂಡಿಂಗ್ ಸೈಟ್ ಅನ್ನು ಹುಡುಕುತ್ತದೆ. ಉತ್ತಮವಾದ ಸ್ಥಳ ದೊರೆತರೆ ಚಂದ್ರಯಾನ ನೌಕೆಯು ಕೇವಲ ಎರಡು ಇಂಜಿನ್‌ಗಳ ಫೈರಿಂಗ್‌ನೊಂದಿಗೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುತ್ತದೆ ಮತ್ತು ವಿಕ್ರಮ್​ ಲ್ಯಾಂಡಿಗ್​ ಕಾಲುಗಳನ್ನು ಪ್ರತಿ ಸೆಕೆಂಡ್​ಗೆ 3 ಮೀಟರ್​ ಅಥವಾ ಗಂಟೆಗೆ 10.8 ಕಿಮೀ ಗರಿಷ್ಠ ಪರಿಣಾಮವನ್ನು ತಡೆಯುವಲ್ಲಿ ವಿನ್ಯಾಸಗೊಳಿಸಲಾಗಿದೆ. ಲ್ಯಾಂಡರ್​​ ಕಾಲುಗಳ ಮೇಲಿನ ಸಂವೇದಕಗಳು ಚಂದ್ರನ ಮೇಲ್ಮೈ ಸ್ಪರ್ಶವನ್ನು ಅನುಭವಿಸಿದ ಕೂಡಲೇ ಇಂಜಿನ್​ಗಳು ತನ್ನ ಕೆಲಸವನ್ನು ಸ್ಥಗಿತಗೊಳಿಸುತ್ತದೆ.

ರೆಗೊಲಿತ್ ಎಂದು ಕರೆಯಲ್ಪಡುವ ಚಂದ್ರನ ಧೂಳನ್ನು ಲ್ಯಾಂಡಿಂಗ್​ನಿಂದ ಹೊರಹಾಕಲಾಗುತ್ತದೆ ಮತ್ತು ದೂರ ಸರಿಯಲು ಮತ್ತು ನೆಲೆಗೊಳ್ಳಲು ಸಹಾಯವಾಗುತ್ತದೆ. ಬಳಿಕ ವಿಕ್ರಮ್​ ಲ್ಯಾಂಡರ್​ ತನ್ನ ರ್ಯಾಂಪ್​ ಅನ್ನು ತೆರೆಯುತ್ತದೆ. ನಂತರ ಅದರಿಂದ ಪ್ರಗ್ಯಾನ್ ರೋವರ್ ನಿಧಾನವಾಗಿ ಕೆಳಕ್ಕೆ ಉರುಳಲಿದೆ. ಒಮ್ಮೆ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯನ್ನು ತಲುಪಿದಾಗ, ರೋವರ್ ಚಂದ್ರನ ಮೇಲ್ಮೈಯ ಸುತ್ತಲೂ ಚಲಿಸಲು ಮುಕ್ತವಾಗಿರುತ್ತದೆ.

ವಿಕ್ರಮ್ ಲ್ಯಾಂಡರ್​ನಲ್ಲಿರುವ ಪ್ರಗ್ಯಾನ್​ ರೋವರ್‌ ಚಿತ್ರಗಳನ್ನು ತೆಗೆದುಕೊಳ್ಳುವಾಗ ಭಾರತ ಈವರೆಗೂ ಕಾದಿದ್ದ ಅತಿದೊಡ್ಡ ಕ್ಷಣವು ಆಗಮಿಸಿದಂತಾಗುತ್ತದೆ. ಚಂದ್ರನ ಮೇಲ್ಮೈಯಿಂದ ಭಾರತದ ಮೊದಲ ಫೋಟೋಗಳನ್ನು ಪ್ರಗ್ಯಾನ್​ ರೋವರ್​ ಕಳುಹಿಸಲಿದೆ. ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಎರಡೂ ಸೌರಶಕ್ತಿಯಿಂದ ಚಾಲಿತವಾಗಿವೆ ಮತ್ತು ಒಂದು ಚಂದ್ರನ ಒಂದು ದಿನಕ್ಕೆ ಬಾಳಿಕೆ ಬರುವಂತೆ ತಯಾರಿಸಲಾಗಿದೆ. ಒಂದು ಚಂದ್ರನ ದಿನ ಭೂಮಿಯ 14 ದಿನಗಳಿಗೆ ಸಮಾನವಾಗಿದೆ.

ಎಲ್ಲವೂ ಅಂದುಕೊಂಡತೆ ನಡೆದರೆ ಭಾರತವು ಚಂದ್ರನ ಮೇಲೆ ಮೃದುವಾಗಿ ಇಳಿದ ನಾಲ್ಕನೇ ದೇಶವಾಗಲಿದೆ. ‘ಅಮೃತ್ ಕಾಲ’ದಲ್ಲಿ ಇಸ್ರೋಗೆ ಒಂದು ಸಣ್ಣ ಹೆಜ್ಜೆ ಮತ್ತು ಭಾರತಕ್ಕೆ ಒಂದು ದೈತ್ಯ ಜಿಗಿತವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net