

ನವದೆಹಲಿ: ಇಲ್ಲೊಬ್ಬ ಯುವತಿ ಕಳೆದ ವರ್ಷ ತೋಳೇರಿಸಿಕೊಂಡು ಓಡಾಡುತ್ತಿದ್ದಳು. ಆದರೆ ಅದಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಇದೀಗ ಫುಲ್ ಸ್ಲೀವ್ಸ್ ಹಾಕಿಕೊಂಡು ಓಡಾಡುತ್ತಿದ್ದಾಳೆ. ಮಾತ್ರವಲ್ಲ, ತನ್ನ ಆ ಒಂದು ನಿರ್ಧಾರಕ್ಕೆ ಈಗ ಈಕೆ ಪಶ್ಚಾತ್ತಾಪವನ್ನೂ ಪಡುತ್ತಿದ್ದಾಳೆ.
ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಒಂದು ಹೊಸ ಟ್ರೆಂಡ್ ಈಕೆಯ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದು, ಇದು ವೈರಲ್ ಆಗಲಾರಂಭಿಸಿದೆ. ಕೋವಿಡಿಯಟ್ ಎಂಬಂತಾಗಿದ್ದ ಈಕೆಗೆ ಈಗ ಅರಿವು ಮೂಡಿದ್ದು, ಮುಖವನ್ನಷ್ಟೇ ಅಲ್ಲ ತೋಳನ್ನೂ ಮರೆಮಾಚಿಕೊಂಡು ಓಡಾಡುತ್ತಿದ್ದಾಳೆ. ಇದಕ್ಕೆಲ್ಲ ಕಾರಣ ಏನು ಎಂದರೆ ಬರೀ ಒಂದು ಹಚ್ಚೆ. ಇದು ಬರೀ ಹಚ್ಚೆಯಾದರೂ ಅದರಲ್ಲಿನ ಸಾಲುಗಳು ಇದೀಗ ಈಕೆಯನ್ನು ಪಶ್ಚಾತ್ತಾಪ ಪಡುವಂತೆ ಮಾಡಿದೆಯಂತೆ.
ಕೋವಿಡ್-19 ಸೋಂಕು ಕಳೆದ ವರ್ಷ ಅತಿಯಾಗಿದ್ದ ಸಂದರ್ಭದಲ್ಲಿ ಸೋಂಕನ್ನು ತಡೆಯಲು ಹಾಗೂ ನಿಯಂತ್ರಿಸಲು ಹೊರಡಿಸಲಾಗಿದ್ದ ಕೋವಿಡ್ ಮಾರ್ಗಸೂಚಿಗಳ ಪೈಕಿ ಅತಿ ಪ್ರಮುಖವಾಗಿದ್ದಿದ್ದು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ದೈಹಿಕ ಅಂತರ ಕಾಪಾಡುವುದು. ಆದರೆ ಅದೆಷ್ಟೋ ಮಂದಿ ಕೋವಿಡ್ ಮಾರ್ಗಸೂಚಿ ಪಾಲಿಸಲು ವಿರೋಧಿಸಿ ಅಥವಾ ಅದನ್ನು ಪಾಲಿಸದೆ ಕೋವಿಡಿಯಟ್ ಎಂಬ ಟೀಕೆಗೂ ಗುರಿಯಾಗಿದ್ದರು.
ಆ ಪೈಕಿ ಈ ಯುವತಿ ಕೂಡ ಒಬ್ಬಳು. 'ಮಾಸ್ಕ್ ಹಾಕಬೇಡಿ, ಅದನ್ನು ಧೈರ್ಯವಾಗಿ ನಿರಾಕರಿಸಿ' ಎಂಬುದಾಗಿ ಕಳೆದ ಮಾರ್ಚ್ನಲ್ಲಿ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಈ ಯುವತಿಗೆ, ಆ ನಂತರ ಕರೊನಾ ಸೋಂಕು ವ್ಯಾಪಿಸಿ, ಉಂಟಾದ ಸಾವು-ಸಂಕಟಗಳನ್ನೆಲ್ಲ ನೋಡಿ ತಪ್ಪಿನ ಅರಿವಾಗಿ ಈಗ ಪ್ರಾಯಶ್ಚಿತ್ತವಾಗಿದೆಯಂತೆ. ಅತಿ ಕೆಟ್ಟ ಟ್ಯಾಟೂವನ್ನು ಸ್ಟೋರಿಯಲ್ಲಿ ಹಂಚಿಕೊಳ್ಳುವ ಕುರಿತಂತೆ ಟಿಕ್ಟಾಕ್ನಲ್ಲಿ ನಡೆಯುತ್ತಿರುವ ಹೊಸ ಟ್ರೆಂಡ್ನಿಂದಾಗಿ ಈ ವಿಷಯ ಬೆಳಕಿಗೆ ಬಂದಿದೆ.
'wakaflockafloccar' ಎಂಬ ಯೂಸರ್ ನೇಮ್ ಹೊಂದಿರುವ ಈ ಯುವತಿ ತನ್ನ ಈ ಟ್ಯಾಟೂ ಅತ್ಯಂತ ತಪ್ಪು ನಿರ್ಧಾರವಾಗಿತ್ತು, ಆ ಬಗ್ಗೆ ಈಗ ಪಶ್ಚಾತ್ತಾಪ ಎನಿಸುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾಳೆ. 'ನಾನು ಕಳೆದ ಕೆಲವು ತಿಂಗಳುಗಳಿಂದ ಈ ಟ್ಯಾಟೂ ಕಾಣಿಸಬಾರದು ಎಂದುಕೊಂಡು ಫುಲ್ ಸ್ಲೀವ್ಸ್ ಹಾಕಿಕೊಳ್ಳುತ್ತಿದ್ದೇನೆ. ಆದರೆ ಬಹುಶಃ ನಾನು ಈ ಹಚ್ಚೆಯನ್ನು ತೆಗೆಯುವುದಿಲ್ಲ ಅನಿಸುತ್ತದೆ. ಏಕೆಂದರೆ ಇದರ ಹಿಂದೊಂದು ಕಥೆ ಇದೆ' ಎಂಬುದಾಗಿ ಈಕೆ ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ