ಹೆರಿಗೆ ಬಳಿಕ ಮಾಸುಚೀಲವನ್ನೂ ಬೇಯಿಸಿ ತಿಂದ ತಾಯಿ!; ಎರಡನೇ ಹೆರಿಗೆ ನಂತರವೂ ಮತ್ತದೇ ಪುನರಾವರ್ತನೆ...

Untitled-1
Published on

ಲಂಡನ್​: ನಾಯಿ-ಬೆಕ್ಕು ಮುಂತಾದ ಪ್ರಾಣಿಗಳು ಮರಿ ಹಾಕಿದ ಬಳಿಕ ಅವುಗಳಲ್ಲಿ ಒಂದಾದರೂ ಮರಿಯನ್ನು ತಿಂದುಬಿಡುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು ತಾಯಿ ತನ್ನ ಎರಡೂ ಹೆರಿಗೆಗಳ ಬಳಿಕ ಮಾಸುಚೀಲವನ್ನೇ ಬೇಯಿಸಿ ತಿಂದಿರುವುದನ್ನು ಹೇಳಿಕೊಂಡಿದ್ದಾಳೆ.

ಲಂಡನ್​ನ ಕೇಂಬ್ರಿಡ್ಜ್​ನಲ್ಲಿರುವ ಕೆಟ್ರಿನಾ ಹಿಲ್ ಎಂಬ ಮಹಿಳೆ ಇಂಥದ್ದೊಂದು ಕೆಲಸವನ್ನು ಮಾಡಿದ್ದಾಳೆ. ಹೆರಿಗೆ ಬಳಿಕದ ಮಾಸುಚೀಲ(ಪ್ಲಾಸೆಂಟ)ವನ್ನು ತಾನು ಆಹಾರವಾಗಿ ಬಳಸಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ. 2016ರಲ್ಲಿ ಮೊದಲ ಹೆರಿಗೆ ಹಾಗೂ 2020ರಲ್ಲಿ ಎರಡನೇ ಹೆರಿಗೆ ಆದಾಗಲೂ ಮಾಸುಚೀಲವನ್ನು ತಿಂದಿರುವುದಾಗಿ ಈ ಮಹಿಳೆ ಹೇಳಿಕೊಂಡಿದ್ದಾಳೆ.

ತನ್ನ ಮೊದಲ ಹೆರಿಗೆಯಲ್ಲಿ ಮಾಸುಚೀಲವನ್ನು ಕ್ಯಾಪ್ಸೂಲ್​ ಥರ ಹೊಟ್ಟೆಗೆ ಸೇರಿಸಿಕೊಳ್ಳುವ ಯೋಚನೆ ಹಿಲ್​ದಾಗಿತ್ತು. ಆದರೆ ಅದಕ್ಕೆ ತಗುಲುವ ವೆಚ್ಚದ ಕಾರಣಕ್ಕೆ ಆ ಯೋಚನೆಯಿಂದ ಹಿಂದೆ ಸರಿದ ಹಿಲ್​, ಆಹಾರದ ರೀತಿಯಲ್ಲಿ ಸೇವಿಸಿದ್ದಾಳೆ. ಈ ಹಿಂದೆಯೂ ಕೆಲವು ತಾಯಂದಿರು ಹೆರಿಗೆ ಬಳಿಕ ಮಾಸುಚೀಲವನ್ನು ಆಹಾರದ ರೀತಿಯಲ್ಲಿ ಸೇವಿಸಿದ್ದನ್ನು ಕಂಡುಕೊಂಡ ಬಳಿಕ ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾಗಿ ಹಿಲ್ ಹೇಳಿಕೊಂಡಿದ್ದಾಳೆ.

2016ರ ಜನವರಿಯಲ್ಲಿ ಮೊದಲ ಹೆರಿಗೆ ಆಗಿದ್ದಾಗ ಮಾಸುಚೀಲವನ್ನು ಚಿಲ್ಲಿ ಮಾಡಿ ತಿಂದಿದ್ದಾಗಿ ಹೇಳಿರುವ ಹಿಲ್​, 2020ರ ಏಪ್ರಿಲ್​ನಲ್ಲಿ ಆದ ಎರಡನೇ ಹೆರಿಗೆ ಬಳಿಕ ಮಾಸುಚೀಲವನ್ನು ಬೇಯಿಸಿ ಬರಿಟೋ(ಒಂದು ವಿಧದ ತಿಂಡಿ) ಜತೆ ತಿಂದಿರುವುದಾಗಿ ಹೇಳಿಕೊಂಡಿದ್ದಾಳೆ. ಮಾಸುಚೀಲವನ್ನು ತಿನ್ನುವುದರಿಂದ ಹೆರಿಗೆ ನಂತರ ಬೇಗ ಚೇತರಿಸಿಕೊಳ್ಳಬಹುದು. ಹೆರಿಗೆ ಬಳಿಕದ ಖಿನ್ನತೆಯ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ಎದೆಹಾಲಿನ ಉತ್ಪಾದನೆ ಹೆಚ್ಚಿರುತ್ತದೆ ಎಂಬುದನ್ನು ಹಿಲ್​ ಕಂಡುಕೊಂಡಿದ್ದಾಗಿ ಹೇಳಿದ್ದಾಳೆ. ಮೊದಲನೆ ಹೆರಿಗೆ ನಂತರ ನಾನು ತುಂಬಾ ಆರಾಮಾಗಿರಲು ಮಾಸುಚೀಲವನ್ನು ತಿಂದಿದ್ದೇ ಕಾರಣವೋ ಏನೋ ಎಂಬುದು ನನಗೆ ಖಚಿತವಿರಲಿಲ್ಲ. ಆದರೆ ಎರಡನೇ ಸಲವೂ ಹಾಗೆ ಮಾಡಿದಾಗ ಅದೇ ಹಿತವಾದ ಅನುಭವವಾಯಿತು ಎಂದಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net