

ವಿಜಯವಾಡ: ಹದಿಹರೆಯದ ಯುವಕನೊಬ್ಬ ತನಗಿಂತಲೂ ಹತ್ತು ವರ್ಷ ಕಿರಿಯವನಾದ ಬಾಲಕನೊಬ್ಬನಿಗೆ ಸಿಹಿತಿನಿಸಿನ ಆಮಿಷವೊಡ್ಡಿ, ಲೈಂಗಿಕವಾಗಿ ಬಳಸಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮತ್ತೊಂದೆಡೆ ಸಂತ್ರಸ್ತ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಹದಿನಾರು ವರ್ಷದ ಯುವಕನೊಬ್ಬ ಆರು ವರ್ಷದ ಬಾಲಕನ ಮೇಲೆ ಈ 'ಅತ್ಯಾಚಾರ' ನಡೆಸಿದ್ದಾನೆ. ಸಿಹಿತಿನಿಸು (ಕ್ಯಾಂಡಿ) ಕೊಡುವ ಆಮಿಷವೊಡ್ಡಿ ತನ್ನ ರೂಮ್ಗೆ ಬಾಲಕನನ್ನು ಕರೆದೊಯ್ದ ಆತ ಅಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮಾತ್ರವಲ್ಲ ವಿಷಯ ಯಾರಿಗೂ ಹೇಳದಂತೆ ಬೆದರಿಸಿ ಕೂಡ ಕಳಿಸಿದ್ದಾನೆ.
ಯುವಕನ ಅಕ್ರಮ ಹಾಗೂ ಅಸಹಜ ಲೈಂಗಿಕ ಸಂಪರ್ಕದಿಂದ ನೋವನುಭವಿಸಿದ್ದ ಹುಡುಗ, ಎಂದಿನಂತೆ ಇರದ್ದನ್ನು ಗಮನಿಸಿದ ಪಾಲಕರು ಏನಾಯಿತು ಎಂದು ಪದೇಪದೆ ವಿಚಾರಿಸಿದ ಮೇಲೆ ಅಸಲಿ ವಿಷಯ ಬಾಯಿಬಿಟ್ಟಿದ್ದಾನೆ. ಬಾಲಕ ನೀಡಿದ ಮಾಹಿತಿ ಮೇರೆಗೆ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬೊಲ್ಲಪಲ್ಲಿ ಮಂಡಲದ ಗುಟ್ಲಪಲ್ಲಿ ಎಂಬಲ್ಲಿ ಶುಕ್ರವಾರ ಈ ಪ್ರಕರಣ ನಡೆದಿದೆ. ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)