ಬೆಂಗಳೂರು: ಧಾರವಾಡ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗುವ ನಿಟ್ಟಿನಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಬರುವ ಎರಡು ತಿಂಗಳೊಳಗೆ ಧಾರವಾಡ ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ನೀಡಿದ ಕಾರ್ನ್ ಫ್ಲೇಕ್ಸ್ನಲ್ಲಿ ಧೂಳು! ರೈಲ್ವೇ ಇಲಾಖೆಗೆ ಸಲಹೆ ನೀಡಿದ ಉದ್ಯಮಿ.
ಈ ಕುರಿತಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರೈಲು ಸೇವೆಯ ಆರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ ವೇಳೆಗೆ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಭರವಸೆಯನ್ನು ರೈಲ್ವೇ ಸಚಿವರು ನೀಡಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.
ಧಾರವಾಡ ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಆರಂಭಿಸಿದರೆ ರಾಜ್ಯದ ಎರಡನೆಯ ವಂದೇ ಭಾರತ್ ರೈಲು ಇದಾಗಲಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲು ತನ್ನ ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ವೇಗದಲ್ಲಿ ಸಂಚರಿಸುತ್ತಿದೆ! ಕಾರಣ ಬಹಿರಂಗಪಡಿಸಿದ ರೈಲ್ವೇ ಇಲಾಖೆ…
ದೇಶದ ಅತಿ ವೇಗದ ರೈಲು ಇದಾಗಿದ್ದು, ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅತ್ಯುತ್ತಮ ದರ್ಜೆಯ ಆಸನಗಳೊಂದಿಗೆ ಐಷಾರಾಮಿ ವ್ಯವಸ್ಥೆಗಳನ್ನು ಈ ರೈಲಿನಲ್ಲಿ ವಿಮಾನದ ರೀತಿ ನಿರ್ಮಿಸಲಾಗಿದೆ. ಇದು ವಿಶ್ವದರ್ಜೆಯ ಸೌಕರ್ಯಗಳನ್ನು ಹೊಂದಿದ್ದು, ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರಿಮಿಯಂ ಕ್ಲಾಸ್‌ಗಳನ್ನು ಈ ರೈಲು ಹೊಂದಿದೆ. ವಂದೇ ಭಾರತ್ ರೈಲಿನಲ್ಲಿ ಆನ್‌ಬೋರ್ಡ್ ಉಪಾಹಾರದ ವ್ಯವಸ್ಥೆ ಇದೆ. ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ವೈ ಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ಸಿಸಿ ಕ್ಯಾಮೆರಾ, ಬಯೋ ಶೌಚಾಲಯ ವ್ಯವಸ್ಥೆಯೂ ಇದೆ ಎಂದು ಪ್ರಲ್ಹಾದ ಜೋಶಿ ವಿವರಿಸಿದ್ದಾರೆ.
ಇದನ್ನೂ ಓದಿ: ನಾರಿ ಶಕ್ತಿಯಿಂದ ಮುನ್ನಡೆಯುತ್ತಿದೆ ವಂದೇ ಭಾರತ್; ಸುರೇಖಾ ಯಾದವ್ ಭಾರತ ಮೊದಲ ಮಹಿಳಾ ರೈಲು ಚಾಲಕಿ!
ಹುಬ್ಬಳ್ಳಿ ಧಾರವಾಡ ಜನತೆ ಬಹು ನಿರೀಕ್ಷಿತ ಈ ಉತ್ಕೃಷ್ಟ ರೈಲಿನ ಪ್ರಯಾಣದ ಅನುಭವವನ್ನು ಶೀಘ್ರದಲ್ಲಿಯೇ ಆಸ್ವಾದಿಸಬಹುದು ಎಂದು ಪ್ರಲ್ಹಾದ ಜೋಶಿ ಸಂತಸ ತಿಳಿಸಿದ್ದಾರೆ.