

Zaheer Khan : ಮದುವೆಯಾದ ಬಳಿಕ ದಾಂಪತ್ಯ ಜೀವನದಲ್ಲಿ ಅನುಮಾನ ಮೂಡುವುದು ಸಹಜ. ಆದರೆ, ಮದುವೆಗೂ ಮುನ್ನವೇ ಇನ್ನೂ ಭೇಟಿಯಾಗದ ಸಮಯದಲ್ಲೇ ಅನುಮಾನ ಮೂಡಿತ್ತು ಎಂದರೆ ಯಾರಾದರೂ ನಂಬುತ್ತಾರಾ? ಖಂಡಿತ ಸಾಧ್ಯವಿಲ್ಲ. ಆದರೆ, ಈ ತಾರಾದಂಪತಿ ತಮ್ಮ ಬಾಳಲ್ಲಿ ಈ ಒಂದು ವಿಚಿತ್ರ ಕ್ಷಣವನ್ನು ಎದುರಿಸಿದ್ದಾರೆ.
ನಿಮಗೆ ಜಹೀರ್ ಖಾನ್ ಅವರನ್ನು ವಿಶೇಷವಾಗಿ ಪರಿಚಯ ಮಾಡುವ ಅಗತ್ಯವಿಲ್ಲ. ಏಕೆಂದರೆ, ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್. ಒಂದು ಕಾಲದಲ್ಲಿ ಜಹೀರ್ ಬೌಲಿಂಗ್ ಅಂದರೆ, ಎಲ್ಲ ಬ್ಯಾಟ್ಸ್ಮನ್ಗಳು ಗಢಗಢ ನಡುಗುತ್ತಿದ್ದರು. ಜಹೀರ್ ಅವರು 8 ವರ್ಷಗಳ ಹಿಂದೆಯೇ ಮದುವೆ ಆಗಿದ್ದಾರೆ. ಅವರ ಪತ್ನಿಯ ಹೆಸರು ಸಾಗರಿಕಾ ಘಾಟ್ಗೆ. ಸಾಗರಿಕಾ ಏನೂ ಸಾಮಾನ್ಯ ಮಹಿಳೆಯಲ್ಲ. ಅವರು ಕೂಡ ಬಾಲಿವುಡ್ ನಟಿ ಹಾಗೂ ಮಾಡೆಲ್. ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಾಗರಿಕ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಪತಿ ಜಹೀರ್ ಕುರಿತು ಆಸಕ್ತಿಕರ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಆರಂಭದಲ್ಲೇ ಸಾಗರಿಕಾ ಮೇಲೆ ಸಂಶಯ ಬೆಳೆಸಿಕೊಂಡಿದ್ದ ಜಹೀರ್, ಅವರನ್ನು ದೂರ ಇಡುತ್ತಿದ್ದರಂತೆ. ಈ ವೇಳೆ ನಟಿ ಅಂಗದ ಬೇಡಿ ಮಧ್ಯ ಪ್ರವೇಶಿಸಿದ ಬಳಿಕ ಇಬ್ಬರ ಸಂಬಂಧ ಮತ್ತೆ ಹಳಿಗೆ ಬಂದು ಕೊನೆಗೆ 2017ರಲ್ಲಿ ಮದುವೆಯಾದರು.
ಬಾಲಿವುಡ್ ಬಬಲ್ ಜತೆ ಮಾತನಾಡಿದ ಸಾಗರಿಕಾ, ಜಹೀರ್ಗೆ ನನ್ನ ಮೇಲೆ ಕೆಟ್ಟ ಅಭಿಪ್ರಾಯವಿತ್ತು. ಹೀಗಾಗಿ ನನ್ನೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದರು. ನಾವಿಬ್ಬರು ಆಗಾಗ ಭೇಟಿಯಾಗುತ್ತಲೇ ಇದ್ದೆವು. ಮೊದಲಿಗೆ ಆತ ನನ್ನೊಂದಿಗೆ ಮಾತನಾಡಲೂ ಇಷ್ಟಪಡುತ್ತಿರಲಿಲ್ಲ. ಏಕೆಂದರೆ, ಎಲ್ಲರೂ, ‘ಅವಳು ಆ ಟೈಪ್ ಹುಡುಗಿ’ ಎಂದು ಜಹೀರ್ಗೆ ಹೇಳುತ್ತಿದ್ದರಂತೆ. ಹೀಗಾಗಿ ನನ್ನೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದರು. ಅವರೇಕೆ ನನ್ನ ಬಗ್ಗೆ ಆ ರೀತಿ ಹೇಳಿದರು ಅಂತ ನನಗೆ ಅರ್ಥವಾಗುತ್ತಿಲ್ಲ. ಈ ರೀತಿಯ ಅಭಿಪ್ರಾಯ ಇದ್ದಾಗ ನೀವು ಆಕೆಯೊಂದಿಗೆ ಮಾತನಾಡಿದರೆ ಮಾತ್ರ ಎಲ್ಲವೂ ಬಗೆಹರಿಯುತ್ತದೆ. ಇಲ್ಲವಾದಲ್ಲಿ, ಅಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂದು ಸಾಗರಿಕಾ ಹೇಳಿದರು.
ಮಾತು ಮುಂದುವರಿಸಿದ ಸಾಗರಿಕಾ, ಮೊದಲ ಭೇಟಿಯ ವೇಳೆ ನಾನು ಜಹೀರ್ ನೋಡಿ ಇಂಪ್ರೆಸ್ ಆದೆ. ಆತ ಓರ್ವ ಒಳ್ಳೆಯ ವ್ಯಕ್ತಿ ಎನಿಸಿತು. ಆರಂಭದ ಹಿಂಜರಿಕೆಯಿಂದ ಜಹೀರ್ ಹೊರಬಂದ ಬಳಿಕ ಇಬ್ಬರು ಭೇಟಿಯಾಗುವುದನ್ನು ಮುಂದುವರಿಸಿದೆವು ಮತ್ತು ತುಂಬಾ ಹತ್ತಿರವಾದೆವು. ನಮ್ಮಿಬ್ಬರ ಸಂಬಂಧ ಇನ್ನಷ್ಟು ಬೆಳೆಯಿತು. ಇದರ ಕ್ರೆಡಿಟ್ ಅನ್ನು ನಾನು ಅಂಗದ ಬೇಡಿ ಅವರಿಗೆ ಕೊಡುತ್ತೇನೆ. ಏಕೆಂದರೆ, ನಮ್ಮಿಬ್ಬರನ್ನು ಒಂದು ಮಾಡುವಲ್ಲಿ ಅಂಗದ ಅವರು ಬಹುಮುಖ್ಯ ಪಾತ್ರ ವಹಿಸಿದರು ಎಂದು ಸಾಗರಿಕ ತಿಳಿಸಿದರು.
ಮದುವೆಯಾಗಿ 8 ವರ್ಷಗಳೇ ಕಳೆದರೂ ಕ್ರೀಡೆ ಅಂತ ಬಂದಾಗ ದಂಪತಿ ತೀವ್ರ ಪೈಪೋಟಿ ನಡೆಸುತ್ತಾರಂತೆ. ಪ್ಯಾಡಲ್ ಟೆನಿಸ್ ಆಡುವಾಗ ಇಬ್ಬರು ಒಂದೇ ತಂಡದಲ್ಲಿರಲು ಸಾಧ್ಯವಿಲ್ಲ ಎಂದು ಸಾಗರಿಕಾ ಹೇಳಿದ್ದಾರೆ. ನಾನು ಯಾವಾಗಲೂ ಹೇಳುತ್ತೇನೆ, ನಾನು ಜ್ಯಾಕ್ ತಂಡದಲ್ಲಿ ಇರಲು ಬಯಸುವುದಿಲ್ಲ ಏಕೆಂದರೆ, ನಾವು ಫೈಟಿಂಗ್ ಮಾಡುತ್ತಲೇ ಇರುತ್ತೇವೆ ಎಂದಿದ್ದಾರೆ. ಆದರೆ, ಸಂಸಾರದ ವಿಚಾರಕ್ಕೆ ಬಂದರೆ ಇಬ್ಬರ ನಡುವೆ ಒಳ್ಳೆಯ ಬಾಂದವ್ಯ ಇದೆ ಎನ್ನುತ್ತಾರೆ ಸಾಗರಿಕಾ. (ಏಜೆನ್ಸೀಸ್)